ಕೋಲಾರ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸೋಮವಾರ ಭೇಟಿ ನೀಡಿ, ಕಾಲೇಜು ಸ್ಥಿತಿಗತಿ ಬಗ್ಗೆ ಪರಿಶೀಲಿಸಿದರು.
ಕಾಲೇಜು ತರಗತಿಗಳ ಕೊಠಡಿ, ಶೌಚಗೃಹ, ಉದ್ಯಾನವನ, ಕಟ್ಟಡಗಳ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದರು. ಸಾಮಾನ್ಯ ಸಮಸ್ಯೆ ಬಗೆಹರಿಸಿಲ್ಲ ಎಂದರೆ ಏನರ್ಥ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದರು.
ಶೌಚಗೃಹ, ಕಟ್ಟಡಗಳ ನಿರ್ಮಾಣ ಕಾಮಗಾರಿ ಅಪೂರ್ಣ, ಸ್ವಚ್ಛತೆ, ನೀರಿನ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು. ಈ ವೇಳೆ ಸಚಿವರು, ಶಾಸಕ ಕೊತ್ತೂರು ಜಿ.ಮಂಜುನಾಥ್ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಕಾಲೇಜಿಗೆ ಭೇಟಿ ನೀಡಿದಾಗ ಸಮಸ್ಯೆ ಇದ್ದರೆ ಪಟ್ಟಿ ಕೊಡಿ ಎಂದು ಕೇಳಿದರೆ, ಆಗ ಏನಿಲ್ಲ ಎಂದು ಈಗ ಸಚಿವರಿಗೆ ಸಮಸ್ಯೆಗಳ ಸರಮಾಲೆಯನ್ನೇ ನೀಡುತ್ತಿದ್ದೀರಲ್ಲ. ಪ್ರಾಂಶುಪಾಲರು, ಉಪನ್ಯಾಸಕರು ಆಟ ಆಡಲು ಬರುತ್ತೀರಾ?. ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಸೌಜನ್ಯ ಇಲ್ಲವೇ?, ನಿಮ್ಮ ಮನೆಗಳಲ್ಲಾದರೆ ಪರಿಸ್ಥಿತಿ ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಕೊತ್ತೂರು ಮಂಜುನಾಥ್ ಕೆಂಡಾಮಂಡಲರಾದರು.
ಶಾಸಕರ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಿ ಪಂಪು ಮೋಟಾರ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಕಟ್ಟಡಗಳ ನಿರ್ಮಾಣದ ಕಾಮಗಾರಿ ಸ್ಥಗಿತಗೊಳ್ಳಲು ಕಾರಣವೇನು ಎಂದು ಪ್ರಾಂಶುಪಾಲರನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನಿಸಿದರು. ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ ಸುಮಾರು ದಿನಗಳು ಕಳೆದಿವೆ, ಕೇಳಿದರೆ ಬಿಲ್ ಪಾವತಿ ಆಗಿಲ್ಲ ಎಂದು ಹೇಳುತ್ತಾರೆ ಎಂದು ಪ್ರಾಂಶುಪಾಲ ಗಂಗಾಧರ್ ತಿಳಿಸಿದರು.
ಕೂಡಲೇ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗೆ ದೂರವಾಣಿ ಕರೆ ಮಾಡಿ, ಕಟ್ಟಡಗಳ ಕಾಮಗಾರಿ ಸ್ಥಗಿತಗೊಳ್ಳಲು ಕಾರಣ ಏನು ಎಂದು ವರದಿ ನೀಡಿ, ಗುತ್ತಿಗೆದಾರನ ಸಮಸ್ಯೆಯಾಗಿದ್ದರೆ ನೋಟಿಸ್ ನೀಡಿ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಲು ಸೂಚಿಸಬೇಕು ಎಂದು ಸಚಿವರು ಆದೇಶಿಸಿದರು.
ಸಿಡಿಕೇಟ್ ಸದಸ್ಯ ಸೀಸಂದ್ರ ಗೋಪಾಲ್‌ಗೌಡ, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಮುಖಂಡರಾದ ರಾಜಕುಮಾರ್, ಚೌಡರೆಡ್ಡಿ ಮತಿತರರು ಇದ್ದರು.
ನನ್ನಾಣೆ ಬಸ್ ನಿಲ್ಲಿಸಲ್ಲ ಸರ್…
ಸರ್ಕಾರಿ ಮಹಿಳಾ ಕಾಲೇಜಿಗೆ ಬಹುತೇಕ ಮಂದಿ ವಿದ್ಯಾರ್ಥಿಗಳು ವಿವಿಧ ಗ್ರಾಮಗಳಿಂದ ಬರುತ್ತಾರೆ. ಮುಳಬಾಗಿಲು, ಸೇರಿ ಗ್ರಾಮಗಳಿಂದ ಬರುವ ಬಸ್‌ಗಳು ಕಾಲೇಜು ಸಮೀಪವಿದ ಪ್ರಯಾಣಿಕರ ತಂಗುದಾಣ ಬಳಿ ನಿಲ್ಲಿಸುವುದಿಲ್ಲ. ಹಳೇ ಬಸ್ ನಿಲ್ದಾಣ, ಕೋರ್ಟ್ ಸರ್ಕಲ್‌ನಲ್ಲಿ ನಿಲ್ಲಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಚಿವರಿಗೆ ವಿದ್ಯಾರ್ಥಿಗಳು ಮನವಿ ಮಾಡಿದರು. ಶಾಸಕ ಕೊತ್ತೂರು ಮಂಜುನಾಥ್, ವಿದ್ಯಾರ್ಥಿಗಳು ಸುಳ್ಳು ಹೇಳಬಾರದು, ಯಾವುದೋ ಒಂದು ಬಸ್ ನಿಲ್ಲಿಸಿಲ್ಲ ಎಂದರೆ ಹೇಳೋಣ ಎಂದರು. `ಇಲ್ಲ ಸರ್, ನನ್ನಾಣೆ ಬಸ್‌ಗಳು ನಿಲ್ಲಿಸುವುದಿಲ್ಲ, ತಕೊಂಡು ಹೋಗಿ ಎಲ್ಲೋ ನಿಲ್ಲಿಸುತ್ತಾರೆ. ಅಲ್ಲಿಂದ ನಾವು ನಡೆದುಕೊಂಡು ಬರುವಷ್ಟರಲ್ಲಿ ತರಗತಿ ಶುರುವಾಗಿರುತ್ತವೆ' ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ಪ್ರತಿಯೊಂದು ಬಸ್ ನೀವು ಹೇಳಿರುವ ಸ್ಥಳಗಳಲ್ಲಿ ನಿಲ್ಲಿಸಲು ಸೂಚಿಸಲಾಗುವುದು ಎಂದರು.