ನ್ಯೂಸ್

'ಆ ಒಂದೂವರೆ ಗಂಟೆ ನಾನು ಸಾಕಷ್ಟು ಆತಂಕಗೊಂಡಿದ್ದೆ': ನಟ ರಜನಿಕಾಂತ್​

ಚೆನ್ನೈ: ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವಿನ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ 70 ರನ್​ಗಳ ​ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕೇವಲ ಜಯ ಮಾತ್ರ ಇರಲಿಲ್ಲ ಜತೆಗೆ ಹೊಸ ದಾಖಲೆ ಕೂಡ ನಿರ್ಮಾಣವಾಯಿತು.

ಟೀಮ್ ಇಂಡಿಯಾದ ರನ್​ ಮಷಿನ್​ ವಿರಾಟ್​ ಕೊಹ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿದು ತಮ್ಮದೇ ನೂತನ ರೆಕಾರ್ಡ್​ ಅನ್ನು ಬರೆದರು. ಶತಕಗಳ ಸರದಾರ ಎಂಬ ಪಟ್ಟವನ್ನು ಗಳಿಸಿದರು. ಸೆಮಿಫೈನಲ್​ ಪಂದ್ಯ ವೀಕ್ಷಿಸಲು ಮುಂಬೈಗೆ ಆಗಮಿಸಿದ್ದ ಸೂಪರ್​ಸ್ಟಾರ್​ ರಜನಿಕಾಂತ್​, ಭಾರತ ತಂಡದ ಗೆಲುವಿನ ನಂತರ ಭರವಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್​ ತಂಡಕ್ಕೆ 397 ಬೃಹತ್ ಗುರಿಯನ್ನು ಚೇಸ್​ ಮಾಡಲು ನೀಡಿದ ಭಾರತ, ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ರೋಚಕ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಅನೇಕ ಸ್ಟಾರ್​ ಕಲಾವಿದರ ಪೈಕಿ ತಮಿಳು ಚಿತ್ರರಂಗದ ತಲೈವಾ ರಜನಿಕಾಂತ್​ ಪ್ರಮುಖರಾಗಿದ್ದರು. ಸಂಪೂರ್ಣ ಪಂದ್ಯವನ್ನು ನೋಡಿದ ರಜನಿ, ಚೆನ್ನೈಗೆ ಹಿಂತಿರುಗಿದ ಬಳಿಕ ಟೀಮ್​ ಇಂಡಿಯಾದ ಗೆಲುವನ್ನು ಕೊಂಡಾಡಿದ್ದಾರೆ.

"ಮೊದಲಿಗೆ ನನಗೆ ಭಯವಾಗಿತ್ತು. ನಂತರ, ವಿಕೆಟ್‌ಗಳು ಬೀಳುತ್ತಲೇ ಇದ್ದಾಗ, ಸಮಾಧಾನವಾಯಿತು. ಆ ಒಂದೂವರೆ ಗಂಟೆಯಲ್ಲಿ, ನಾನು ಸಾಕಷ್ಟು ಆತಂಕಗೊಂಡಿದ್ದೆ. ಈ ವಿಶ್ವಕಪ್ ನಮ್ಮದೇ ಎಂದು ನನಗೆ 100% ಗ್ಯಾರಂಟಿಯಿದೆ" ಎಂದು ನಟ ರಜನಿಕಾಂತ್ ಭರವಸೆ ವ್ಯಕ್ತಪಡಿಸಿದರು. ಸದ್ಯ ರಜನಿ ಅವರ ಈ ಹೇಳಿಕೆ ಇದೀಗ ನೆಟ್ಟಿಗರ ಗಮನಸೆಳೆದಿದ್ದು, ನಿಮ್ಮ ಮಾತಿನಂತೆಯೇ ಆಗಲಿ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).