ನ್ಯೂಯಾರ್ಕ್: ಭಾರತದ ಕರೊನಾ ಲಸಿಕೆಗಳಿಗೆ ಮಾನ್ಯತೆ ಕೊಡುವ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅತಿಶಯವಾದ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ(ಯುಎನ್ಜಿಎ)ಯ 76ನೇ ಸದನದ ಅಧ್ಯಕ್ಷ ಅಬ್ದುಲ್ಲಾ ಶಹೀದ್ ಅವರ ಮಾತೊಂದು ಜಾಗತಿಕ ಪರಿಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ. ಕರೊನಾ ಲಸಿಕೆಗಳಿಗೆ ಮಾನ್ಯತೆ ನೀಡುವ ಬಗೆಗಿನ ಪ್ರಶ್ನೆಯೊಂದಕ್ಕೆ, ಜಗತ್ತಿನ ದೊಡ್ಡ ಪ್ರಮಾಣದ ರಾಷ್ಟ್ರಗಳು ಭಾರತದ ಕೋವಿಶೀಲ್ಡ್ ಲಸಿಕೆ ಪಡೆದಿವೆ. ತಾವೂ ಕೋವಿಶೀಲ್ಡ್ನ ಎರಡು ಡೋಸ್ಗಳನ್ನೇ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಇಂಗ್ಲೆಂಡಿನ ಆಸ್ಟ್ರಾಜೆನೆಕಾ ಕಂಪೆನಿಯ ಲಸಿಕೆಯನ್ನೇ ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್ ಆಗಿ ಉತ್ಪಾದಿಸುತ್ತಿದೆ. ಆದರೂ ಇಂಗ್ಲೇಂಡಿಗೆ ಕೋವಿಶೀಲ್ಡ್ ಪಡೆದಿರುವ ಭಾರತೀಯರು ಹೋದಾಗ 10 ದಿನಗಳ ಕ್ವಾರೆಂಟೈನ್ ವಿಧಿಸುವುದಾಗಿ ಇಂಗ್ಲೆಂಡ್ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಈಗ ಭಾರತವೂ ಇಂಗ್ಲೆಂಡಿನಿಂದ ಬರುವ ಯಾತ್ರಿಕರಿಗೆ 10 ದಿನಗಳ ಕ್ವಾರೆಂಟೈನ್ ವಿಧಿಸುವುದಾಗಿ ಪ್ರತ್ಯುತ್ತರ ನೀಡಿದೆ.
ಹೀಗಿರುವಾಗ, ಶುಕ್ರವಾರ ಸುದ್ದಿಗಾರರೊಬ್ಬರು, ಯಾವುದೇ ಕರೊನಾ ಲಸಿಕೆಗೆ ದೇಶಗಳು ಮಾನ್ಯತೆ ನೀಡಬೇಕೆ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ಲಸಿಕೆಗಳನ್ನು ಮಾತ್ರ ಪರಿಗಣಿಸಬೇಕೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಯುಎನ್ಜಿಎ ಅಧ್ಯಕ್ಷ ಅಬ್ದುಲ್ಲಾ ಶಹೀದ್, "ಲಸಿಕೆಗಳ ಬಗ್ಗೆ ನೀವು ತುಂಬಾ ತಾಂತ್ರಿಕವಾದ ಪ್ರಶ್ನೆ ಕೇಳಿದ್ದೀರಿ. ನಾನು ಭಾರತದ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದೀನಿ. ಎಷ್ಟು ದೇಶಗಳು ಕೋವಿಶೀಲ್ಡ್ ಸ್ವೀಕರಣೀಯ ಎನ್ನುತ್ತವೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ದೊಡ್ಡ ಪ್ರಮಾಣದ ದೇಶಗಳು ಕೋವಿಶೀಲ್ಡ್ಅನ್ನು ಪಡೆದುಕೊಂಡಿವೆ" ಎಂದರು. ನಂತರ "ನಾನು ಬದುಕುಳಿದಿದ್ದೇನೆ. ಆದರೆ ಲಸಿಕೆಗಳ ಬಗ್ಗೆ ವೈದ್ಯಕೀಯ ಹಿನ್ನೆಲೆ ಇರುವ ಬೇರೆ ಯಾರಾದರೂ ಆ ನಿರ್ಣಯ ತೆಗೆದುಕೊಳ್ಳಲಿ, ನಾನು ಹೇಳಲಾಗದು" ಎಂದು ನಕ್ಕರು ಎಂದು ವರದಿ ತಿಳಿಸಿದೆ.
ಭಾರತ ಈವರೆಗೆ 66 ಮಿಲಿಯನ್ ಲಸಿಕೆ ಡೋಸ್ಗಳನ್ನು 100 ದೇಶಗಳಿಗೆ ರಫ್ತು ಮಾಡಿದೆ. ಶಹೀದ್ ಅವರ ದೇಶವಾದ ಮಾಲ್ಡೀವ್ಸ್ ಜನವರಿ 2021 ರಲ್ಲಿ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದ ಮೊದಲ ದೇಶಗಳಲ್ಲಿ ಒಂದು. ಈವರೆಗೆ 3.12 ಲಕ್ಷ ಡೋಸ್ಗಳಷ್ಟು ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ ಡೋಸ್ಗಳನ್ನು ಮಾಲ್ಡೀವ್ಸ್ ಸಹಾಯಾರ್ಥವಾಗಿ, ಕೋವಾಕ್ಸ್ ಸೌಲಭ್ಯದಡಿ ಮತ್ತು ವಾಣಿಜ್ಯ ಒಪ್ಪಂದಗಳಡಿ ಪಡೆದುಕೊಂಡಿದೆ ಎನ್ನಲಾಗಿದೆ. (ಏಜೆನ್ಸೀಸ್)