ನ್ಯೂಸ್

ನಾನು ರಾಜೀನಾಮೆ ಕೊಡ್ತಿನಿ, ನೀವು ಕೊಡ್ತಿರಾ?; ಅಶೋಕ್ ಓಪನ್ ಚಾಲೆಂಜ್

ಶ್ರೀಕಾಂತ್ ಶೇಷಾದ್ರಿ


ಬೆಂಗಳೂರು: ಹನ್ನೆರಡು ವರ್ಷದ ಹಳೆಯ ಭೂಮಿ ಪ್ರಕರಣ ಕೆದಕಿ ತಮ್ಮ ರಾಜಿನಾಮೆ ಕೇಳಿದ್ದ ನಾಲ್ವರು ಸಚಿವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಓಪನ್ ಚಾಲೆಂಜ್ ಹಾಕಿದ್ದಾರೆ.
ನನ್ನ ಪ್ರಕರಣಕ್ಕೂ ಸಿದ್ದರಾಮಯ್ಯನವರ ಮುಡಾ ಹಗರಣಕ್ಕೂ ಹೋಲಿಕೆ ಬೇಡ, ಇದು ನಾನು ಹಣ ಕೊಟ್ಟು ಖರೀದಿಸಿದ ಭೂಮಿ, ಅರಿಶಿನ-ಕುಂಕುಮದಿಂದ ಬಂದಿಲ್ಲ. ನಾನು ರಾಜೀನಾಮೆ ನೀಡಲು ಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಡೀ ಸಚಿವ ಸಂಪುಟ ರಾಜೀನಾಮೆ ನೀಡುತ್ತದೆಯೇ? ಎಂದು ಸವಾಲೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಪ್ಪಿತಸ್ಥನೆಂದು ನ್ಯಾಯಾಲಯ ಮತ್ತು ರಾಜ್ಯಪಾಲರು ಎಲ್ಲೂ ಹೇಳಿಲ್ಲ, ನ್ಯಾಯಾಲಯಕ್ಕಿಂತ ಕಾಂಗ್ರೆಸ್ ಪಕ್ಷ ದೊಡ್ಡದೇ? ಎಂದು ಪ್ರಶ್ನಿಸಿದರು.
ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ ನಾಲ್ಕು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ಘನ ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೂ ಕಾಂಗ್ರೆಸ್ ಪಕ್ಷ ನ್ಯಾಯಾಲಯಕ್ಕಿಂತ ದೊಡ್ಡದಾಗಲು ಯತ್ನಿಸಿ ತೀರ್ಪು ನೀಡಲು ಮುಂದಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ, ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದು ಹೇಳಿದರು.

ಅಕ್ರಮವಾಗಿಲ್ಲ
ನನ್ನ ವಿರುದ್ಧ ಆರೋಪ ಮಾಡಿದ ಪ್ರಕರಣದಲ್ಲಿ, 1995ರಲ್ಲಿ ಆಗಿರುವ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ. ಆದರೆ ಇದು ಬಿಡಿಎ ಭೂಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಕೂಡ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರ್.ಅಶೋಕ ಹೇಳಿದರು.
ಸುಮಾರು 1 ಎಕರೆ ವ್ಯಾಪ್ತಿಯ ಈ ಜಾಗ, ಹೊರವರ್ತುಲ ರಸ್ತೆಯ ಪಕ್ಕವಿದೆ. ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದೇ ಅಂದು ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಹೇಳಿದ್ದರು. ಈ ಭೂಮಿ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ. ಉಳಿದ ಜಮೀನು ಅಗತ್ಯವಿಲ್ಲವೆಂದು ಸರ್ಕಾರವೇ ವಾಪಸ್ ನೀಡಿದೆ. ಬಿಡಿಎದಿಂದಲೇ ಭೂ ಮಾಲೀಕರಿಗೆ ಪತ್ರ ಬರೆದಿದ್ದು, ಅದರಂತೆ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ ಎಂದು ವಿವರಿಸಿದರು.

ಗಡುವು
ನಾನು 24 ಗಂಟೆ ಗಡುವು ನೀಡುತ್ತೇನೆ. ಸಚಿವ ಸಂಪುಟದ ಎಲ್ಲ ಸಚಿವರು ಮುಖ್ಯಮಂತ್ರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುತ್ತೇವೆ, ಬಂಡೆಯಂತೆ ನಿಂತಿದ್ದೇವೆ ಎಂದು ಹೇಳಿದ್ದಾರೆ. ಮೊದಲು ಈ ನಾಲ್ಕು ಸಚಿವರು ಸಿದ್ದರಾಮಯ್ಯನವರಿಗಾಗಿ ರಾಜೀನಾಮೆ ನೀಡಲಿ. ಈ ಮೂಲಕ ಅವರ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆಯೇ? ಡಿ.ಕೆ.ಶಿವಕುಮಾರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಇದ್ದಾರೆಯೇ ಎಂದು ಗೊತ್ತಾಗಲಿ. ಅವರೆಲ್ಲರೂ ರಾಜೀನಾಮೆ ನೀಡುವುದಾದರೆ ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದರು.
ನನಗೆ ಕಳಂಕ ತರಲು ಮಾಡುತ್ತಿರುವ ಷಡ್ಯಂತ್ರ ಸರಿಯಲ್ಲ. ನಾನು ಎಲ್ಲೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ವಿರೋಧ ಪಕ್ಷದಲ್ಲಿರುವುದರಿಂದ ನನ್ನ ಕರ್ತವ್ಯ ಮಾತ್ರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

  • ನಾನು ಆರೋಪ ಮುಕ್ತ, ಸಿದ್ದರಾಮಯ್ಯ ಅಲ್ಲ!
    ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನ ಹಿಂದಿರುಗಿಸಿದ್ದಾರೆ. ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿರಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು ಆರೋಪ ಮುಕ್ತ ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ ಎಂದು ಆರ್.ಅಶೋಕ್ ಕುಟುಕಿದರು.