ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಗಾಯಕ ಮತ್ತು ಸಂಗೀತಗಾರ ಅದ್ನಾನ್ ಸಮಿಗೆ ಕಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಕೇಂದ್ರ ಗೃಹ ಸಚಿವಾಲಯ ಅದ್ನಾನ್ ಸಮಿ ಅವರ ತವರು ರಾಜ್ಯ ಮಹಾರಾಷ್ಟ್ರ ಎಂದು ಪ್ರಶಸ್ತಿ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಆದರೆ, 2016 ಜನವರಿ 1ರಿಂದ ಜಾರಿಗೆ ಬರುವಂತೆ ಸಮಿ ಭಾರತೀಯ ಪೌರತ್ವ ಪಡೆದುಕೊಂಡಿರುವುದು ಎಷ್ಟೋ ಮಂದಿಗೆ ಗೊತ್ತಿಲ್ಲ. 2015 ಮೇ 26ರಂದು ಪಾಕಿಸ್ತಾನ ಪಾಸ್ಪೋರ್ಟ್ ಅವಧಿ ಮುಗಿದ ಬಳಿಕ ಅದ್ನಾನ್ ಸಮಿ ಪಾಸ್ಪೋರ್ಟ್ ನವೀಕೃತ ಮಾಡಿಕೊಂಡಿಲ್ಲ.
ಸಮಿ ಪಾಕಿಸ್ತಾನದ ಲಾಹೋರ್ನಲ್ಲಿ ಜನಿಸಿದವರು. ಒಂದು ವರ್ಷದ ಅವಧಿಗೆ ವೀಸಾ ಪಡೆದು 2001 ಮಾರ್ಚ್ 13ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಮಾನವೀಯತೆ ಆಧಾರದ ಮೇಲೆ ತನ್ನ ಸ್ಥಾನಮಾನವನ್ನು ಕಾನೂನುಗೊಳಿಸುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡ ಬಳಿ ಸಮಿಗೆ ಭಾರತೀಯ ಪೌರತ್ವ ನೀಡಲಾಯಿತು.
ಅನೇಕ ಸೆಲೆಬ್ರಿಟಿಗಳ ನಡುವೆ ಸಮಿಗೆ ಪ್ರಶಸ್ತಿ ಸಂದಿರುವುದು ಅವರಿಗೆ ಖುಷಿಯ ವಿಚಾರವಾದರೂ ಅನೇಕರು ಇದನ್ನು ಪ್ರಶ್ನಿಸುತ್ತಿದ್ದಾರೆ. ಯಾವ ಆಧಾರದ ಮೇಲೆ ಪ್ರಶಸ್ತಿ ನೀಡಿದಿರಿ? ನಿಮಗೆ ಪ್ರಶಸ್ತಿ ನೀಡಲಾಯಿತೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ವ್ಯಂಗ್ಯವಾಗಿ ಉತ್ತರ ನೀಡಿರುವ ಸಮಿ, ನಾನು ಒಳ್ಳೆಯ ಬಿರಿಯಾನಿ ತಯಾರಿಸುತ್ತೇನೆ ಎಂದಿದ್ದಾರೆ.
ಇಷ್ಟೇ ಅಲ್ಲದೆ, ಮತ್ತೊಂದು ಟ್ವೀಟ್ ಮೂಲಕ ನನ್ನ ದಿವಂಗತ ತಂದೆಯಂತೆ ನನಗೂ ನನ್ನ ಮೇಲೆ ಹೆಮ್ಮೆ ಇದೆ. ಕಲೆ ಮತ್ತು ದೇಶಕ್ಕೆ ನೀಡಿದ ಕೊಡುಗೆ ಆಧಾರದ ಮೇಲೆ ನನ್ನ ದೇಶ ಗೌರವಪೂರ್ವಕವಾಗಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು, ನಾನದನ್ನು ಸ್ವೀಕರಿಸುತ್ತೇನೆ. ನಿನ್ನ ಜೀವನಕ್ಕೆ ಮಾತ್ರ ನೀನು ಯಾವಾಗಲು ಜವಾಬ್ದಾರಿಯುತ ಮತ್ತು ಉತ್ತರಾಧಿಕಾರಿಯಾಗಿರಬೇಕು. ನ್ಯಾಯದ ಇತಿಹಾಸ ಅದನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.
34 ವರ್ಷದ ಸಂಗೀತ ಜರ್ನಿಯನ್ನು ಗುರುತಿಸಿ ಗೌರವಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರಕ್ಕೂ ಅದ್ನಾನ್ ಸಮಿ ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್)