▪️ ಎಸ್‌ಐಆರ್ ವಿವಾದದ ನಡುವೆ ರಾಹುಲ್ ಗಾಂಧಿ ಮಾರ್ಮಿಕ ಪೋಸ್ಟ್
▪️ ‘ಭೋರ್ಗರೆವ ಸಮುದ್ರದಲ್ಲಿ ಈಜುವುದು ಇಷ್ಟ’ ಎಂದ ಕಾಂಗ್ರೆಸ್ ನಾಯಕ
▪️ ಚುನಾವಣಾ ಆಯೋಗದ ವರದಿಗೆ ಇಬ್ಬರು ಆಯುಕ್ತರ ಆಕ್ಷೇಪ
Rahul Gandhi: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ರಾಜಕೀಯ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಮಾಡಿರುವ ಮಾರ್ಮಿಕ ಪೋಸ್ಟ್ ಗಮನ ಸೆಳೆದಿದೆ.
‘ಸಮುದ್ರದ ಅಲೆಗಳು ಭೋರ್ಗರೆಯುವಾಗ ಈಜುವುದು ನನಗೆ ಇಷ್ಟ. ರೌದ್ರತೆ ಕೂಡ ಮತ್ತೊಂದು ರೀತಿಯ ಶಾಂತಿಯೇ ಎಂಬುದನ್ನು ಅದು ಕಲಿಸುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಈ ಪೋಸ್ಟ್ ಅನ್ನು ಯಾವ ವಿಚಾರಕ್ಕೆ ಸಂಬಂಧಿಸಿ ಹಾಕಲಾಗಿದೆ ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಿಲ್ಲ.
ಇದೇ ವೇಳೆ, ವರದಿಯೊಂದರ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಆಯೋಗದ ಕೆಲವು ನಿರ್ಧಾರಗಳು ಹಾಗೂ ಆದೇಶಗಳ ಬಗ್ಗೆ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿರ್ಧಾರಗಳು ತಮ್ಮ ಗಮನಕ್ಕೆ ಅಥವಾ ಶಿಫಾರಸಿಗೆ ಬಂದಿರಲಿಲ್ಲ ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
ಎಸ್‌ಐಆರ್ ಪ್ರಕ್ರಿಯೆ ಬಳಿಕ ಕರಡು ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದ್ದು, ಈ ವಿಚಾರವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿ ಕಳೆದ ವರ್ಷದಿಂದಲೇ ಚುನಾವಣಾ ಅಕ್ರಮದ ಆರೋಪ ಮಾಡುತ್ತಾ ‘ವೋಟ್ ಚೋರಿ’ ವಿಚಾರ ಪ್ರಸ್ತಾಪಿಸುತ್ತಿದ್ದಾರೆ
ಆದರೆ ಎಸ್‌ಐಆರ್ ಸೇರಿದಂತೆ ಆಯೋಗದ ಎಲ್ಲ ನಿರ್ಧಾರಗಳನ್ನು ಮೂವರು ಚುನಾವಣಾ ಆಯುಕ್ತರ ಅನುಮೋದನೆಯೊಂದಿಗೆ ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ಭಾರತದಲ್ಲಿ ಕಂಡ ಅಪರೂಪದ ಹಾವು: ರಾಜಸ್ಥಾನದಲ್ಲಿ 3 ಸಿಸ್ತಾನ್ ಸ್ಯಾಂಡ್ ಬೋವಾ ಪತ್ತೆ | Sistan Sand Boa
ಎಸ್‌ಐಆರ್ ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈ ವಿಚಾರ ಸೇರಿದಂತೆ ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ಸುಧಾರಣೆಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 30ರಂದು ಇಂಡಿಯಾ ಬ್ಲಾಕ್ ಸಭೆ ನಡೆಯಲಿದೆ.(ಏಜೆನ್ಸೀಸ್)