ಮೆಂಟರ್ ಮುಖ್ಯ: ಎಲ್ಲರಿಗೂ ಜೀವನದಲ್ಲಿ ಮುಂದುವರಿಯಲು ಒಬ್ಬ ಮೆಂಟರ್ ಇರಬೇಕು. ನನಗೆ ಲಂಕೇಶ್ರಂತಹ ಅದ್ಭುತ ಮೆಂಟರ್ ಸಿಕ್ಕಿದ್ದರು. ಸಿನಿಮಾದಲ್ಲಿ ಹೀರೋ ಮಾಡಿದರು. ಅವರ ಪತ್ರಿಕೆಯಲ್ಲೂ ಬರೆಯಲು ಅವಕಾಶ ನೀಡಿದ್ದರು. ನನ್ನನ್ನು ಕೈಹಿಡಿದು ನಡೆಸಿದರು. ನನ್ನ ಪ್ರಪ್ರಥಮ ಗುರು ಅಪ್ಪ, ನಂತರ ಪಿ. ಲಂಕೇಶ್ ಅವರೇ ನನ್ನ ಗುರು.
ಜತೆಗಿದ್ದವರು ಕಲಿಸಿದ್ದೇ ಹೆಚ್ಚು: ನಾನೇನೂ ಸ್ವಂತ ಕಲಿಯಲಿಲ್ಲ. ನನ್ನ ಜತೆಗಿದ್ದವರು ನನಗೆ ಕಲಿಸಿದ್ದೇ ಹೆಚ್ಚು. ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ಸಹ. ಗೆಳೆಯರೊಬ್ಬರಿಗೆ ಲೋನ್ ತೆಗೆದುಕೊಳ್ಳಲು ಶ್ಯೂರಿಟಿ ಹಾಕಿ ಹಲವು ವರ್ಷಗಳ ಕಾಲ ಸಮಸ್ಯೆಗೆ ಸಿಲುಕಿದ್ದೆ. ಆ ಸಮಯದಲ್ಲೇ ನನಗೆ ಧಾರಾವಾಹಿ ನಿರ್ದೇಶಿಸಲು ಅವಕಾಶ ದೊರೆಯಿತು. ಸಮಸ್ಯೆ ಹೇಗೆ ನನ್ನನ್ನು ಹುಡುಕಿಕೊಂಡು ಬಂದಿತ್ತೋ, ಅದೇ ರೀತಿ ಅವಕಾಶವೂ ಹುಡುಕಿಕೊಂಡು ಬಂದಿತ್ತು. ಮೊದಲು ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದು ಪಿ. ಲಂಕೇಶ್ ಸರ್... ಬಳಿಕ ಧಾರಾವಾಹಿಗಳಲ್ಲಿ ಬಿಜಿಯಾದೆ. ಒಂದರ ಬಳಿಕ ಮತ್ತೊಂದು ಎಂಬಂತೆ ಸೀರಿಯಲ್ಗಳಲ್ಲಿ ಅವಕಾಶಗಳು ದೊರೆಯತೊಡಗಿದವು. ಜತೆಗೆ ಊರಿನಲ್ಲೂ ಕೃಷಿ ಮಾಡುತ್ತಿದ್ದೇನೆ. ಶೂಟಿಂಗ್ ಇಲ್ಲದಿರುವಾಗ ಅಥವಾ ಧಾರಾವಾಹಿ ಕೆಲಸಗಳು ಇರಲಿ, ಇಲ್ಲದಿರಲಿ, ಆಗಾಗ ಸಮಯ ಮಾಡಿಕೊಂಡು ಊರಿಗೆ ಹೋಗುತ್ತಿರುತ್ತೇನೆ.
ಯುವಕರು ಸಾಹಿತ್ಯ ಓದಬೇಕು: ಇವತ್ತು ಹೊಸತನ್ನು ಪ್ರಯತ್ನಿಸುತ್ತಿರುವುದು ಯುವಕರೇ. ಇಂದಿನ ಯುವಪೀಳಿಗೆ ಕುಳಿತ ಜಾಗದಲ್ಲೇ ಎಲ್ಲ ಬಗೆಯ ಮಾಹಿತಿಗೆ, ತಂತ್ರಜ್ಞಾನಕ್ಕೆ ಎಕ್ಸ್ಪೋಸ್ ಆಗುತ್ತಿದ್ದಾರೆ. ನಮ್ಮ ಕಾಲದಲ್ಲಿ ನಾವು ಪೇಪರ್ಗಷ್ಟೇ ಸೀಮಿತವಾಗಿದ್ದೆವು. ಆದರೆ, ಇವತ್ತು ಮೊಬೈಲ್ನಲ್ಲೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು, ಕಲಿಯಬಹುದು. ಆಯ್ಕೆ ಮಾಡಿಕೊಳ್ಳಲು ಇವತ್ತು ತುಂಬ ಇದೆ. ಹೀಗೆ ಹಲವು ವಿಷಯಗಳಿಗೆ ಒಡ್ಡಿಕೊಂಡಿರುವ ಕಾರಣ ಒಂದು ವಿಷಯದ ಕುರಿತ ಫೋಕಸ್ ಕಡಿಮೆಯಾಗಿದೆ. ಹೀಗಾಗಿಯೇ ಮಗುವಿನಲ್ಲಿರುವ ಬೆರಗು ಉಳಿದುಕೊಳ್ಳಬೇಕು. ಕೆಟ್ಟದ್ದನ್ನೂ ಒಳ್ಳೆಯದೇ ಅಂತ ನಂಬಿರುತ್ತಾರೆ. ಅದೇ ರೀತಿ ಕುತೂಹಲಕ್ಕಿಂತ ಮಕ್ಕಳಲ್ಲಿರುವ ಬೆರಗು, ನಂಬಿಕೆ ಮುಖ್ಯ. ಓದುವುದರ ಜತೆಗೆ ಬರವಣಿಗೆ ಕೂಡ ಮುಖ್ಯ. ಅವೆರಡರಲ್ಲಿ ಪಕ್ಕಾ ಆಗಿಬಿಟ್ಟರೆ, ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು. ಒಂದು ಕ್ಷೇತ್ರ ತುಂಬ ಚೆನ್ನಾಗಿದೆ ಅಂತ ನಿಮಗೆ ಅನ್ನಿಸಿದ ಮಾತ್ರಕ್ಕೆ ಆ ಕ್ಷೇತ್ರಕ್ಕೆ ಬರಬಾರದು. ಆ ಕ್ಷೇತ್ರ ನಿಜವಾಗಲೂ ಚೆನ್ನಾಗಿದೆ ಅಂತ ನಿಮಗೆ ಅರ್ಥವಾಗಿದ್ದು, ಅದರಲ್ಲಿ ನೀವೂ ಬೆಳೆಯಬಹುದು ಎಂಬ ಸ್ಪಷ್ಟತೆ ಇದ್ದರೆ ಮಾತ್ರ ಬರಬೇಕು. ನಿಜವಾದ ಟಿಎನ್ಎಸ್ ಯಾರು?: ‘ನೆನಪಿನ ಪುಟಗಳು’ ಪುಸ್ತಕದಲ್ಲಿ ಬಾಲ್ಯದಿಂದ ಹಿಡಿದು ನನ್ನ ಧಾರಾವಾಹಿವರೆಗಿನ ಬದುಕಿನವರೆಗೂ ಬರೆದಿದ್ದೇನೆ. ಧಾರಾವಾಹಿಯೇ ಸೀತಾರಾಮ್ ಬದುಕು ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ, ನಿಜವಾದ ಸೀತಾರಾಮ್ ಯಾರು ಎಂಬುದು ನನಗೇ ಗೊತ್ತಿಲ್ಲ.
ನಾವೇ ದಾರಿ ಸೃಷ್ಟಿಸಿಕೊಳ್ಳಬೇಕು: ಕಿರುತೆರೆ, ಸಿನಿಮಾ ಬಳಿಕ ಇದೀಗ ಒಟಿಟಿಗಾಗಿ ವೆಬ್ಸರಣಿ ಮಾಡುತ್ತಿದ್ದೇನೆ. ಧಾರಾವಾಹಿಗಳು ಮತ್ತು ವಾಹಿನಿಗಳ ಚಿಂತನೆ ಈಗ ಬದಲಾಗಿದೆ. ಅವರ ಅವಶ್ಯಕತೆಗಳು ಬೇರೆ ಆಗಿವೆ. ಹೀಗಾಗಿ ‘ಮಗಳು ಜಾನಕಿ’ಯ ಬಳಿಕ ನಾನು ಮತ್ತೆ ಧಾರಾವಾಹಿ ಮಾಡಲಿಲ್ಲ. ಕಥೆಗಳು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಮ್ಮ ಆಲೋಚನೆಗೆ ಪೂರಕವಾಗಿ ಕಂಟೆಂಟ್ ಮೂಡಿಬರಬೇಕು. ಆದರೆ, ವಾಹಿನಿಗಳು ಕಿರುತೆರೆ ಧಾರಾವಾಹಿಗಳು ಸ್ವಂತಿಕೆಗಿಂತ ರಿಮೇಕ್ಗೆ ಹೆಚ್ಚು ಒತ್ತು ನೀಡುತ್ತಿವೆ. ಮುಂಬೈ ಅಥವಾ ಚೆನ್ನೈ ಸೇರಿ ಬೇರೆ ಭಾಷೆಗಳಲ್ಲಿ ಹಿಟ್ ಆದ ಧಾರಾವಾಹಿಗಳ ಕಥೆಗಳನ್ನು ಇಲ್ಲಿಗೆ ತಂದು, ಕೆಲ ಬದಲಾವಣೆಗಳೊಂದಿಗೆ ರಿಮೇಕ್ ಮಾಡಿ ಎನ್ನುತ್ತಾರೆ. ನಾನು ಹೃದಯವನ್ನು ರ್ಸ³ಸುವ ಕಥೆಗಳನ್ನು ಮಾಡಲು ಇಷ್ಟಪಡುವವನು. ಅವರು ರೋಚಕತೆಯ ಕಥೆಗಳು ಬೇಕು ಎನ್ನುತ್ತಾರೆ.
ಹೀಗಾಗಿ ನಾನು ಕೆಲ ಸಮಾನ ಮನಸ್ಕರ ಜತೆ ಸೇರಿ ಭೂಮಿಕಾ ಮಿನಿ ಒಟಿಟಿ ಪ್ರಾರಂಭಿಸಲಿದ್ದೇನೆ. ಆ ಮೂಲಕ ‘ಮಾಯಾ ಮರ್ಡರ್ ಕೇಸ್’ ಎಂಬ ವೆಬ್ಸರಣಿಯನ್ನು ಮಾಡಲಿದ್ದೇನೆ. ಸದ್ಯ ಈ ವೆಬ್ಸಿರೀಸ್ ಶೂಟಿಂಗ್ ನಡೆಯುತ್ತಿದೆ. ‘ಮಾಯಾಮೃಗ’, ‘ಮುಕ್ತ’, ‘ಮಗಳು ಜಾನಕಿ’ ಸೇರಿ ನನ್ನ ಎಲ್ಲ ಧಾರಾವಾಹಿಗಳಲ್ಲೂ ಕೆಳಮಧ್ಯಮ ವರ್ಗ, ಮಧ್ಯಮ ವರ್ಗ, ಶ್ರೀಮಂತ ಅಥವಾ ಪವರ್ಫುಲ್ ರಾಜಕಾರಣಿ ಹೀಗೆ ವರ್ಗಗಳಿರುತ್ತವೆ. ಅವುಗಳಲ್ಲಿ ಮಹಿಳೆಯ ಹೋರಾಟವಿರುತ್ತದೆ. ‘ಮಾಯಾ ಮರ್ಡರ್ ಕೇಸ್’ ಕೂಡ ಒಂದು ಹೆಣ್ಣಿನ ಕಥೆ. ಕೋರ್ಟ್ ರೂಮ್ ಸಸ್ಪೆನ್ಸ್ ಮತ್ತು ಒಂದು ಹೆಣ್ಣಿನ ಮನಸ್ಸಿನ ಬೇರೆ ರೀತಿಯ ಯೋಚನೆಗಳು, ಆಕೆ ರೆಬೆಲ್ ಆಗುವ ರೀತಿಯ ಸುತ್ತ ಕಥೆ ಸಾಗುತ್ತದೆ. ನಮ್ಮ ಒಟಿಟಿ ವೇದಿಕೆಯ ಮೊದಲ ಪ್ರಯೋಗ ಈ ಸರಣಿ ಆಗಿರಲಿದೆ. ಇದೇ ಆಗಸ್ಟ್ನಲ್ಲಿ ಒಟಿಟಿ ಮತ್ತು ಸರಣಿ ಎರಡನ್ನೂ ಲಾಂಚ್ ಮಾಡಲಿದ್ದೇವೆ. ಈ ಸರಣಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ಒಂದು ಸೀರಿಯಲ್ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟತೆ ದೊರೆಯಲಿದೆ.
ಪಾಪಪ್ರಜ್ಞೆ ಇದೆ: ಪಿ. ಲಂಕೇಶ್, ಅನಂತಮೂರ್ತಿಯವರಿಂದ ಪ್ರಭಾವಿತನಾಗಿದ್ದೆ. ಸಮಾಜವಾದದ ಕಡೆಗೆ ಒಲವು ಹೆಚ್ಚಿತ್ತು. ಬೆಂಗಳೂರಿನಲ್ಲಿ ಬಿಎಸ್ಸಿ ಬಳಿಕ ಕಾನೂನು ಓದಿದೆ. ತಂದೆ 20 ಎಕರೆಯಷ್ಟು ಜಮೀನು ಮಾಡಿದ್ದರು. ‘ಆಸ್ತಿ ಅಂದರೆ ಕಳ್ಳತನ, ಅದನ್ನು ಯಾರೂ ಇಟ್ಟುಕೊಳ್ಳಬಾರದು’ ಎಂಬುದು ನನ್ನ ಭಾವನೆಯಾಗಿತ್ತು. ಓದು ಮುಗಿಸಿ ಊರಿಗೆ ಬಂದು ಲಾಯರ್ ಆಗು ಅಂತ ತಂದೆ ಹೇಳಿದ್ದರು. ನಾನು ಆಗ ಲಂಕೇಶ್ ಅವರ ಜತೆ ನಾಟಕಗಳನ್ನು ಮಾಡುತ್ತಿದ್ದೆ. ‘ನನಗೆ ಆಸ್ತಿ ಬೇಡ, ಕಷ್ಟಪಟ್ಟು ದುಡಿಯುತ್ತೇನೆ. ನಿಮ್ಮ ಆಸ್ತಿ ನನಗೆ ಕಿಲುಬು ಕಾಸಿನ ಸಮ. ನಾನಿಲ್ಲೇ ಇರುತ್ತೇನೆ. ಊರಿಗೆ ಬರುವುದಿಲ್ಲ’ ಎಂದು ಕಾಗದ ಬರೆದೆ. ಆಗ ತಂದೆಗೆ ಅನಾರೋಗ್ಯ. ಅದು ನನಗೆ ಗೊತ್ತಿರಲಿಲ್ಲ. ನನ್ನ ಕಾಗದ ಓದಿದ ಬಳಿಕ ಅವರು ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟರು. ವಿಧಿವಶರಾದರು. ಆ ನೋವು, ಪಾಪಪ್ರಜ್ಞೆ ನನ್ನಲ್ಲಿ ಈಗಲೂ ಇದೆ.
ಅಳದೇ ಅಳಿಸುವುದನ್ನು ಕಣಗಾಲರಿಂದ ಕಲಿತೆ: ತುರ್ತು ಪರಿಸ್ಥಿತಿಯ ಬಗ್ಗೆ ‘ಆಸ್ಪೋಟ’ ಎಂಬ ನಾಟಕ ಬರೆದಿದ್ದೆ. ನಾಗೇಶ್ ಅದನ್ನು ನಿರ್ದೇಶಿಸಿದ್ದರು. ಚೆನ್ನೈನಲ್ಲಿ ನೂರನೇ ಪ್ರದರ್ಶನ ಆಯೋಜಿಸಲಾಗಿತ್ತು. ಆಗ ಪುಟ್ಟಣ್ಣ ಕಣಗಾಲ್ ಅವರು ಚೆನ್ನೈನಲ್ಲಿದ್ದರು. ಪುಟ್ಟಣ್ಣ ಅವರ ಬಾಲ್ಯದ ಹೆಸರೂ ಸೀತಾರಾಮ್ ಆಗಿತ್ತು. ಮನೆಯಲ್ಲಿ ಪುಟ್ಟಣ್ಣ ಅಂತ ಕರೆಯುತ್ತಿದ್ದ ಕಾರಣ, ಅವರು ಚಿತ್ರರಂಗಕ್ಕೆ ಬಂದಾಗಲೂ ಅದೇ ಹೆಸರನ್ನು ಮುಂದುವರಿಸಿದ್ದರು. ನಾಟಕ, ಅದರ ಸಂಭಾಷಣೆ ನೋಡಿ ಮೆಚ್ಚಿಕೊಂಡಿದ್ದ ಅವರು, ಚೆನ್ನೈನಲ್ಲಿ ಭೇಟಿಯಾಗಿ ನನ್ನನ್ನು ಮತ್ತು ನಾಗೇಶ್ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದರು. ನಾನು, ನಾಗೇಶ್ ಪುಟ್ಟಣ್ಣ ಕಣಗಾಲರ ಮನೆಗೆ ಹೋದೆವು. ಅವರು ಮಾತನಾಡುತ್ತಿದ್ದರೆ, ಅದು ಕಣ್ಣಿಗೆ ಕಟ್ಟುವಂತಿರುತ್ತಿತ್ತು. ಅವರು ಮಾತಿನ ಮೂಲಕವೇ ಕೇಳುಗನ ಪಲ್ಸ್ ಅರ್ಥ ಮಾಡಿಕೊಂಡಿದ್ದರು. ಸಿನಿಮಾದಲ್ಲೂ ಅದನ್ನು ಅದ್ಭುತವಾಗಿ ಅಳವಡಿಸುತ್ತಿದ್ದರು. ತೆರೆಯ ಮೇಲೆ ಅಳದೇ ಅಳಿಸುವುದನ್ನು ನಾನು ಅವರಿಂದ ಕಲಿತೆ. ಇದಾಗಿ ಕೆಲ ದಿನಗಳ ಬಳಿಕ ಖುದ್ದು ಕಣಗಾಲ್ ಸರ್ ನನ್ನೂರಿಗೆ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನನಗೆ ಒಂದು ಕಥೆ ಹೇಳಿ ಚಿತ್ರಕಥೆ, ಸಂಭಾಷಣೆ ಬರೆಯಲು ಹೇಳಿದರು. ನಮಗಾಗಿ ಒಂದು ಫೈವ್ಸ್ಟಾರ್ ಹೋಟೆಲ್ನಲ್ಲಿ ರೂಮ್ ಮಾಡಿಕೊಟ್ಟರು. ನಾನು 95 ಸೀನ್ ಬರೆದುಬಿಟ್ಟಿದ್ದೆ. ಅದನ್ನು ಓದಿದ ಬಳಿಕ, ಕಣಗಾಲ್ ಸರ್ ‘ನಾಳೆಯಿಂದ ಸಂಡೂರಿನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ನೀವೂ ಬನ್ನಿ’ ಎಂದರು. ‘ಮಾನಸ ಸರೋವರ’ ಶೂಟಿಂಗ್ ಅದು. ಅವರು ಪ್ರತಿ ಸೀನ್ ನೋಡುತ್ತಿದ್ದರು, ಬಳಿಕ ಕಲಾವಿದರಿಗೆ ಡೈಲಾಗ್ಸ್ ಹೀಗಿರಬೇಕು ಎಂದು ತಾವೇ ಬಾಯಿಯಲ್ಲಿ ಹೇಳಿಬಿಡುತ್ತಿದ್ದರು. ಅದನ್ನು ನೋಡಿ ನನಗೆ ಅವಮಾನ ಆದಂತಾಗಿತ್ತು. ಎರಡು ದಿನಗಳ ಬಳಿಕ ಯಾಕೆ ನಾನು ಬರೆದ ಡೈಲಾಗ್ಸ್ ಬಳಸುತ್ತಿಲ್ಲ ಎಂದು ಕೇಳಿಯೇಬಿಟ್ಟೆ. ಆಗ ಅವರು ‘ನಿಮ್ಮ ಸಂಭಾಷಣೆಯಲ್ಲಿ ದೈನಂದಿನ ಮಾತಿಗಿಂತ ಕಾವ್ಯಾತ್ಮಕ ಹೆಚ್ಚು’ ಎಂದರು. ಬಳಿಕ ಮೂರನೇ ದಿನ ನಾನು ಬರೆದಿದ್ದ ಒಂದು ಡೈಲಾಗ್ ಉಪಯೋಗಿಸಿದರು. ಹೀಗೆ 14 ದಿನಗಳ ಬಳಿಕ ನಾನು ಬರೆದಿದ್ದ ಒಂದು ಪೂರ್ತಿ ಸೀನ್ ಉಪಯೋಗಿಸಿದರು. ಕಲಿಕೆ ಮುಂದುವರಿಯುತ್ತಿರಬೇಕು. ಆ ಕಲಿಕೆಯಿಂದಲೇ ನಾಟಕ, ಧಾರಾವಾಹಿ, ಸಿನಿಮಾ, ವೆಬ್ಸರಣಿಗಳನ್ನು ಮಾಡಲು ಸಾಧ್ಯವಾಗಿದೆ.
ಮನ್ನಣೆ ತಲೆಗೆ ಏರಬಾರದು: ನನ್ನ ಅನುಭವ ನನ್ನ ತಲೆಯಲ್ಲಿ ಕೂತಾಗ ಅದಕ್ಕೆ ಮನ್ನಣೆ ಇರುವುದಿಲ್ಲ. ಆ ಮನ್ನಣೆ ಚಪ್ಪಾಳೆ, ಧನ, ಮಾತಿನಿಂದಲೇ ದೊರೆತಿರಬಹುದು. ‘ಅದೆಷ್ಟು ಚೆನ್ನಾಗಿತ್ತು, ನನ್ನ ಕಣ್ಣಲ್ಲಿ ನೀರು ಬಂದುಬಿಟ್ಟಿತು’ ಎಂದು ಯಾರಾದರೂ ಹೇಳಿದಾಗ ನನಗೆ ತುಂಬ ಸಂತೋಷವಾಗುತ್ತದೆ. ಅವರ ಕಣ್ಣಲ್ಲಿ ನೀರು ಬಂತು ಅಂದರೆ ನನಗೆ ಸಂತೋಷ ಯಾಕಾಗುತ್ತೆ ಅಂದರೆ, ನಾನೇನೋ ಮಾಡಿದ ಕೆಲಸಕ್ಕೆ ಮನ್ನಣೆ ಸಿಕ್ಕಿತು ಅಂತ. ನಮ್ಮಲ್ಲಿ ಪ್ರತಿದಿನ ನೂರೆಂಟು ನೆನಪುಗಳು ಬರುತ್ತವೆ. ಅವನ್ನೆಲ್ಲ ಒಂದು ಕ್ರಮ ನೀಡಿದಾಗ, ಅದನ್ನು ಧನ್ಯತೆಯಿಂದ ನೋಡಿದಾಗ ಅವು ನಮಗೆ ವಿಚಿತ್ರವಾದ ಆನಂದದ ಜತೆಗೆ ವಿಷಾದದ ನೆನಪುಗಳನ್ನೂ ತರಬಹುದು. ಕ್ರಮೇಣ ಅದು ಪಾಸಿಟಿವ್ ಶಕ್ತಿಯಾಗಿ ಬೆಳೆಯುತ್ತದೆ.
ನಿರೂಪಣೆ: ಬ್ಯಾಡನೂರು ಹರ್ಷ