ಬೆಂಗಳೂರು: ಹೋರಾಟದಿಂದಲೇ ರಾಜಕೀಯದಲ್ಲಿ ಬೆಳೆದು ಬಂದಿರುವೆ. ನೂರು ಎಫ್ ಐಆರ್ ಹಾಕಿದರೂ ಹೆದರುವುದಿಲ್ಲ, ಓಡಿ ಹೋಗುವುದಿಲ್ಲ. ಬಂಧನಕ್ಕೂ ಒಳಗಾಗುವೆ. ಕಾನೂನುರೀತ್ಯ ಹೋರಾಟ ಮಾಡುವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕ್ ಪರ ಘೋಷಣೆ ಕೇಳಿ ಬಂದಿದೆ. ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಗಣೇಶ ವಿಗ್ರಹಗಳನ್ನು ಪೊಲೀಸರು ವ್ಯಾನ್ ನಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಿದ್ದಾರೆ. ಅದೇ ವಿಡಿಯೋವನ್ನು ನಾನು ಮತ್ತು ಆರ್.ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇವೆ.
ಇದಕ್ಕೆ ಪ್ರಚೋದನೆಯ ಅರ್ಥ ಕಲ್ಪಿಸಿ ಕೇಸ್ ಹಾಕಿದ್ದು, ಎದುರಿಸುತ್ತೇವೆ. ಈ ಹಿಂದೆ ಹನುಮಾನ್ ಚಾಲೀಸಾ ಪಠಣ ಮಾಡಿದ್ದಕ್ಕೂ ಕೇಸ್ ಹಾಕಿದ್ದರು. ಕ್ಷಮೆ ಕೇಳುವುದಿಲ್ಲ, ಸುಪ್ರೀಂ ಕೋರ್ಟ್ ವರೆಗೂ ಹೋರಾಟ ಮಾಡುತ್ತೇನೆ ಎಂದು ವಕೀಲರ ಮೂಲಕ ತಿಳಿಸಿದ್ದೇನೆ.
ಬಾಂಗ್ಲಾ ದೇಶ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆ. ಶೇಖ್ ಹಸೀನಾ ರೀತಿಯಲ್ಲಿ ಹೊರ ದಬ್ಬುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದು ಪ್ರಚೋದನೆಯಲ್ಲವೆ. ನಮ್ಮ ಕಾರ್ಯಕರ್ತರು ದೂರು ಸಲ್ಲಿಸಲು ಈಗಲೂ ಠಾಣೆಗೆ ಅಲೆದಾಡುತ್ತಿದ್ದಾರೆ. ಎಫ್ ಐ ಆರ್ ಕೂಡ ದಾಖಲಿಸಿಲ್ಲ ಎಂದು ಶೋಭಾ ಕರಂದ್ಲಾಜೆ ಆಕ್ಷೇಪಿಸಿದರು.
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. 135 ಶಾಸಕರ ಬಲವಿದೆ ಎಂಬ ಅಹಂಕಾರದಲ್ಲಿ ಸಿದ್ದರಾಮಯ್ಯ ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದಾರೆ. ಇವರ ಕುಮ್ಮಕ್ಕಿನಿಂದ ಅಲ್ಪಸಂಖ್ಯಾತ ಕಿಡಿಗೇಡಿಗಳು ದೇಶ ವಿದ್ರೋಹಿ ಕೃತ್ಯ ಎಸಗುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಹೊರಗೆ ಕಾಲಿಟ್ಟರೆ ಕೇಸ್ ದಾಖಲಿಸಲಾಗುತ್ತಿದೆ ಎಂದು ದೂರಿದರು.
ನಾಗಮಂಗಲ, ಕೋಲಾರ, ಬೆಳಗಾವಿಯಲ್ಲಿ ದೇಶ ದ್ರೋಹದ ಕೃತ್ಯಗಳಾಗಿವೆ. ಈ ಹಿಂದೆ ಸಿದ್ದರಾಮಯ್ಯ ಕೇಸ್ ವಾಪಸ್ ಪಡೆದು, ಹೊರಗೆ ಬಿಟ್ಟ ಕಿಡಿಗೇಡಿಗಳಿಂದ ಈಗ ದುಷ್ಕೃತ್ಯಗಳು ನಡೆಯುತ್ತಿದ್ದು, ಈಗಲೂ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರ ಶಾಶ್ವತವಲ್ಲ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಎಚ್ಚರಿಸಿದರು.