ನ್ಯೂಸ್

ಕೇಳಿದ್ದು ಬೆಟ್ಟದಷ್ಟು... ಸಿಕ್ಕಿದ್ದು ಸಾಸಿವೆಯಷ್ಟು...!

ಕಿರುವಾರ ಎಸ್. ಸುದರ್ಶನ್ ಕೋಲಾರ

ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೇಳಿದ್ದು ಬೆಟ್ಟದಷ್ಟು. ಆದರೆ, ಸಿಕ್ಕಿದ್ದು ಸಾಸಿವೆ ಕಾಳಿನಷ್ಟು ಎಂಬತಾಗಿದೆ.

ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಜನತೆಗೆ ಸಿಹಿಗಿಂತ ಕಹಿಯೇ ಹೆಚ್ಚು ಎಂಬ ಮಾತು ಕೇಳಿಬಂದಿವೆ. ನಾಲ್ವರು ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್ಸಿಗಳಿರುವ ಜಿಲ್ಲೆಗೆ ಬಜೆಟ್‌ನಲ್ಲಿ ಸಿಂಹಪಾಲು ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಹಳೆಯ ಬೇಡಿಕೆ ಹಾಗೆಯೇ ಉಳಿದರೂ ಹೊಸ ಕಾರ್ಯಕ್ರಮ ಘೋಷಣೆಗೆ ಜನರು ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಬಹುಮುಖ್ಯವಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ಕಲ್ಪಿಸುವುದು, ಮಾವು-ಟೊಮ್ಯಾಟೊ ಸಂಸ್ಕರಣ ಘಟಕ ನಿರ್ಮಾಣ, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದು, ಗೌನಿಪಲ್ಲಿ, ನಂಗಲಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿಸುವುದು, ಕೋಲಾರದಲ್ಲಿ ರಿಂಗ್ ರೋಡ್ ನಿರ್ಮಾಣ, ಮುಳಬಾಗಿಲು, ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತು, ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು, ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ, ಎತ್ತಿಹೊಳೆ ಯೋಜನೆಯಿಂದ ಕುಡಿಯುವ ನೀರನ್ನು ಜಿಲ್ಲೆಗೆ ಹರಿಸಬೇಕು ಎಂಬ ಹಲವು ವರ್ಷದ ಬೇಡಿಕೆಗಳು ಈ ಬಾರಿಯೂ ಈಡೇರಿಲ್ಲ.

ಬಜೆಟ್ ಅಧಿವೇಶನಕ್ಕೂ ಮುಂಚೆಯೇ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್ ಹಾಗೂ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಾ ಅವರು ಬೇಡಿಕೆಗಳ ಪಟ್ಟಿಯನ್ನು ಸಿಎಂ, ಡಿಸಿಎಂ ಹಾಗೂ ಸಂಬಂಧಪಟ್ಟ ಇಲಾಖಾ ಸಚಿವರಿಗೆ ಸಲ್ಲಿಸಿದ್ದರು.

ಅಂತೆಯೇ, ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ರೈತ ಸಂಘಗಳು, ಕನ್ನಡ ಪರ ಸಂಘಟನೆಗಳು, ರಾಜಕೀಯ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಬಜೆಟ್‌ನಲ್ಲಿ ಹಳೆ ಯೋಜನಗೆ ಸಿಎಂ ಪ್ರಾಧಾನ್ಯ ನೀಡದಿರುವುದು ನಿರಾಸೆಗೆ ಕಾರಣವಾಗಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದಲ್ಲಿ ಮೆಡಿಕಲ್ ಕಾಲೇಜು ಹಾಗೂ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಬಹು ವಲಯ ನಿವ್ವಳ ಶೂನ್ಯ ಸುಸ್ಥಿರತೆ ಕೈಗಾರಿಕಾ ಉದ್ಯಾನ ಹಾಗೂ ಕೆಜಿಎಫ್‌ನಲ್ಲಿ ರೈತರ ಆಧುನಿಕ ಮಾರುಕಟ್ಟೆ ಸ್ಥಾಪನೆಗೆ ಅಸ್ತು ಎಂದಿದ್ದು, ಇದು ಎಷ್ಟರಮಟ್ಟಿಗೆ ಈಡೇರುತ್ತದೆ ಎಂದು ಕಾದು ನೋಡಬೇಕಿದೆ.

ಇದರ ನಡುವೆ, ಮಾಲೂರು, ಕೆಜಿಎಫ್, ಕೋಲಾರ ಕ್ಷೇತ್ರಗಳಿಗೆ ಸಿಕ್ಕಿರುವಷ್ಟು ಆದ್ಯತೆ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ಕಾರ್ಯಕ್ರಮಗಳು ಸಿಕ್ಕಿಲ್ಲ. ಇದು ಆಯಾ ಕ್ಷೇತ್ರದ ಶಾಸಕರು, ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

* ಸಮಸ್ಯೆಗಿಲ್ಲ ಪರಿಹಾರ

ಎಪಿಎಂಸಿ ಮಾರುಕಟ್ಟೆಗೆ ಹೆಚ್ಚುವರಿ ಜಾಗ ಕಲ್ಪಿಸಬೇಕು ಎಂಬ ಬೇಡಿಕೆ ಬೇಡಿಕೆಯಾಗಿಯೇ ಉಳಿಯುವಂತಾಗಿದೆ. ಮಾವು ಮತ್ತು ಟೊಮ್ಯಾಟೊ ಸಂಸ್ಕೃರಣ ಘಟಕಗಳ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕು ಹಾಗೂ ಎರಡನೇ ಹಂತದ ಕಾಮಗಾರಿಗೆ ವೇಗ ನೀಡಬೇಕು ಎಂಬ ಒತ್ತಾಯವಿತ್ತು. ಎತ್ತಿನ ಹೊಳೆ ಯೋಜನೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದ್ದು, ಈ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರು ಹರಿಸಬೇಕು ಎಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.

* ಪಿಪಿಪಿ ಆಧಾರದಲ್ಲಿ ಮೆಡಿಕಲ್ ಕಾಲೇಜು, ಕೈಗಾರಿಕಾ ಪಾರ್ಕ್

ಕೋಲಾರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಬೇಕು ಎಂದು ವಿವಿಧ ಸಂಘ-ಸAಸ್ಥೆ, ಜನಪ್ರತಿನಿಧಿಗಳು ಸಿಎಂ, ಡಿಸಿಎಂಗೆ ಮನವಿ ಸಲ್ಲಿಸಿದ್ದರು. ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ, ಈಗ ಸಾರ್ವಜನಿಕ ಸಹ ಭಾಗಿತ್ವದಲ್ಲಿ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರಿಂದ ಕೇಳಿ ಬಂದಿದೆ.

ಪಟ್ಟಿ...

ಜಿಲ್ಲೆಗೆ ಸಿಕ್ಕಿರುವುದೇನು...?

* ಪಿಪಿಪಿ ಆಧಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ

* ಪಿಪಿಪಿ ಆಧಾರದಲ್ಲಿ ಶಿವಾರಪಟ್ಟಣಲ್ಲಿ ಬಹು ವಲಯ ನಿಲ್ವಳ ಶೂನ್ಯ ಸುಸ್ಥಿರತಾ ಕೈಗಾರಿಕಾ ಉದ್ಯಾನ ನಿರ್ಮಾಣ

* ಉದ್ಯೋಗಸ್ಥ ಮಹಿಳೆಯ ಸುರಕ್ಷತೆ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಕೋಲಾರ ತಾಲೂಕಿನ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ 6000 ಸಾಮರ್ಥ್ಯದ ಮಹಿಳಾ ವಸತಿ ನಿಲಯ ನಿರ್ಮಾಣ.

* ದೇವನಹಳ್ಳಿ, ವಿಜಯಪುರ, ಎಚ್.ಕ್ರಾಸ್, ವೇಮಗಲ್, ಮಾಲೂರಿಂದ ತಮಿಳುನಾಡು ಗಡಿಯವರೆಗೆ 3,190 ಕೋಟಿ ವೆಚ್ಚದಲ್ಲಿ 132 ಕಿಮಿ ಕೈಗೆತ್ತಿಗೊಂಡಿದ್ದು, ಅದರಲ್ಲಿ ಪ್ರಸಕ್ತ ಸಾಲಿನಲ್ಲಿ30 ಕಿಮಿ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಲಾಗುವುದು.

* ಕೆಜಿಎಫ್‌ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದು.

* ಮಾಲೂರು ತಾಲೂಕು ಆಸ್ಪತ್ರೆ ನವೀಕರಣಕ್ಕೆ ಹಣ ಮೀಸಲು.

* ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ.

* ಕೆಜಿಎಫ್ ಬಳಿ ಎರಡು ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು ೮೦ ಕೋಟಿ ರೂ. ಅನುದಾನ ಮೀಸಲು.

ಕೋಟ್...

ಮುಂದಿನ ಅಧಿವೇಶನದೊಳಗೆ ರಿಂಗ್ ರೋಡ್ ನಿರ್ಮಾಣ ಸಂಬAಧ ಡಿಪಿಆರ್ ಸಿದ್ಧಪಿಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅನಂತರ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗುವುದು. ಜತೆಗೆ ಜಿಲ್ಲಾ ಸಚಿವರ ಇಲಾಖೆಯ ಖಾತೆಯಲ್ಲಿ ಲಭ್ಯವಿರುವ ಅನುದಾನ ಬಿಡುಗಡೆ ಮಾಡಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಆದರೂ ಸಹ ಮನವಿ ಮಾಡಿದ್ದಷ್ಟು ಬೇಡಿಕೆಗಳಲ್ಲಿ ಕೆಲವು ಈಡೇರಿವೆ.

* ಎಂ.ಎಲ್.ಅನಿಲ್ ಕುಮಾರ್, ಎಂಎಲ್ಸಿ, ಕೋಲಾರ.