ಮುಂಬೈ: ನಟ ಸೈಫ್ ಅಲಿ ಖಾನ್ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಯನ್ನು ಪತ್ತೆಹಚ್ಚಲು 20 ತಂಡಗಳನ್ನು ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನೂ ಘಟನೆ ನಡೆದಾಗ ನಟ ಸೈಫ್ ಅಲಿ ಖಾನ್ರನ್ನು (Saif Ali Khan) ಆಟೋ ಮೂಲಕ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ವರದಿಯಾಗಿತ್ತು. ಇದೀಗ ಆಟೋ ಚಾಲಕ ನಟ ಸೈಫ್ ಅಲಿ ಖಾನ್ರನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಆಟೋ ಚಾಲಕ ಭಜನ್ ಸಿಂಗ್ ರಾಣಾ ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಘಟನೆ ಬಗ್ಗೆ ವಿವರಿಸಿರುವ ರಾಣಾ, ಘಟನೆ ನಡೆದಾಗ ನಾನು ಲಿಂಕಿನ್ ರೋಡ್ ಮೂಲಕ ಹೋಗುತ್ತಿದ್ದೆ. ಓರ್ವ ಮಹಿಳೆ ಆಟೋ ನಿಲ್ಲಿಸಿ ಎಂದು ಜೋರಾಗಿ ಕೂಗುತ್ತಾ ಓಡಿ ಬಂದರು. ಆ ಬಳಿಕ ಸದ್ಗುರು ನಿವಾಸದ ಗೇಟ್ (ನಟ ಸೈಫ್ ಅಲಿ ಖಾನ್ ಅವರ ಅಪಾರ್ಟ್ಮೆಂಟ್) ಬಳಿ ಇರುವಂತೆ ಸೂಚಿಸಿದರು. ಅವರು ಸೈಫ್ ಅಲಿ ಖಾನ್ (Saif Ali Khan) ಎಂದು ನನಗೆ ತಿಳಿದಿರಲಿಲ್ಲ.
ಆ ಬಳಿಕ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ರಕ್ತಸಿಕ್ತವಾಗಿ ಓರ್ವ ಬಾಲಕ ಹಾಗೂ ಯುವಕನೊಂದಿಗೆ ಬಂದು ಆಟೋದಲ್ಲಿ ಕುಳಿತರು. ನಾನು ಯಾವ ಕಡೆ ಹೋಗಬೇಕೆಂದು ಕೇಳಿದೆ. ಅವರು ಲೀಲಾವತಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಮೊದಲಿಗೆ ಅವರನ್ನು ನೋಡಿ ಭಯವಾಯಿತು. ನಾನು ಗಾಬರಿಯಲ್ಲೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದೆ. ಆ ಬಳಿಕ ಅವರೇ ಸ್ಟ್ರೆಚರ್ ತಗೊಂಡು ಬನ್ನಿ ಸೈಫ್ ಅಲಿ ಖಾನ್ ಎಂದು ಪರಿಚಯಿಸಿಕೊಂಡರು. ಅಲ್ಲಿಯವರೆಗೂ ಅವರು ಯಾರೆಂಬುದೆ ನನಗೆ ಗೊತ್ತಿರಲಿಲ್ಲ ಎಂದು ಆಟೋ ಚಾಲಕ ಭಜನ್ ಸಿಂಗ್ ರಾಣಾ ಘಟನೆ ಕುರಿತಾಗಿ ಹೇಳಿದ್ದಾರೆ.