ನ್ಯೂಸ್

ನಿಶಾ ಜಿಂದಾಲ್ ಹೆಸರಿನ​ ಮಹಿಳೆಯನ್ನು ಹುಡುಕಿ ಹೊರಟ ಪೊಲೀಸರಿಗೆ ಕೊನೆಯಲ್ಲಿ ಕಾದಿತ್ತೊಂದು ಶಾಕ್​!

ರಾಯ್​ಪುರ್​(ಛತ್ತೀಸ್​ಗಢ): ಮಹಿಳೆಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ಸೃಷ್ಟಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಛತ್ತೀಸ್​ಗಢ ಪೊಲೀಸರು ತಮ್ಮ ಖೆಡ್ಡಾಗೆ ಕೆಡವಿದ್ದಾರೆ.

ಸ್ಥಳೀಯ ಮಾಧ್ಯಮ ಪ್ರಕಾರ ಆರೋಪಿ ರವಿ ಪೂಜಾರ್​ ಎಂಬಾತ 'ನಿಶಾ ಜಿಂದಾಲ್​' ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ಹೊಂದಿದ್ದ. ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿರುವ ಪೂಜಾರ್​ ನಕಲಿ ಖಾತೆಯನ್ನು ಬರೋಬ್ಬರಿ 10 ಸಾವಿರ ಮಂದಿ ಫಾಲೋ ಮಾಡುತ್ತಿದ್ದರು.

ಆರೋಪಿ ಬಗೆಗಿನ ಕುತೂಹಲಕಾರಿ ವಿಚಾರವೆಂದರೆ, ಆತ ಕಳೆದ 11 ವರ್ಷಗಳಿಂದ ಇಂಜಿನಿಯರಿಂಗ್ ಪರೀಕ್ಷೆಯನ್ನೇ ಪಾಸ್​ ಮಾಡಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಲ್ಲಿ ನಿಶಾ ಜಿಂದಾಲ್​ರನ್ನು ಬಂಧಿಸಲು ಹೋಗಿದ್ದ ರಾಯ್​ಪುರ್​ಪೊಲೀಸರಿಗೆ ರವಿ ಪೂಜಾರ್​ ಪತ್ತೆಯಾಗಿದ್ದಾನೆ. ಆ ಬಳಿಕವಷ್ಟೇ ಆತ ನಕಲಿ ಫೇಸ್​ಬುಕ್​ ಖಾತೆ ಹೊಂದಿದ್ದಾನೆ ಎಂಬ ಸತ್ಯಾಂಶ ತಿಳಿದಿದೆ.

ಇದೀಗ ಫೇಸ್​ಬುಕ್ ಪೇಜ್​ನಲ್ಲಿ ಅಧಿಕೃತ ಫೋಟೋ ಹಾಕಿ, ಫಾಲೋವರ್ಸ್​ಗಳಿಗೆ ಸತ್ಯಾಂಶ ತಿಳಿಸುವಂತೆ ಆರೋಪಿ ರವಿ ಪೂಜಾರ್​ಗೆ ಪೊಲೀಸರು ತಾಕೀತು ಮಾಡಿದ್ದಾರೆ. ಅದರಂತೆಯೇ ತನ್ನ ಫೋಟೋ ಹಾಕಿ ನಾನು ಪೊಲೀಸ್​ ಕಸ್ಟಡಿಯಲ್ಲಿ ಇದ್ದೇನೆ ಎಂದು ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದಾನೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್ ಅವರು ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಯಾವುದೇ ವಂಚನೆಯು ಉಳಿಯಬಾರದು. ತಪ್ಪು ಸಂದೇಶ ಹರಡಿದವನಿಂದಲೇ ನಿಜಾಂಶ ಬಯಲಾಗಲಿ ಎನ್ನತ್ತಾ ಪೊಲೀಸರದ್ದು ಉತ್ತಮ ಕೆಲಸವೆಂದು ಮೆಚ್ಚಿದ್ದಾರೆ.

ಆರೋಪಿ ಪೂಜಾರ್​ನನ್ನು ಐಪಿ ಮಾಹಿತಿಯ ಮೂಲಕ ಶುಕ್ರವಾರ ಬಂಧಿಸಲಾಗಿದ್ದು, ಆತನ ಮನೆಯಲ್ಲಿ ಲ್ಯಾಪ್​ಟ್ಯಾಪ್​ ಮತ್ತು ಮೊಬೈಲ್​ ಫೋನ್ಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)​