ಹಾಸನ: ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಯಾರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂಬುವುದನ್ನು ಕೇಂದ್ರದ ನಾಯಕರು, ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು. ಹಿರಿಯ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಿದರೆ ತೆಗೆದುಕೊಳ್ಳುತ್ತೇನೆ. ಷಡ್ಯಂತ್ರದ ಮೂಲಕ ನನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ. ಆ ಕೇಸ್‌ನಿಂದ ಮುಕ್ತರಾಗಿ ಬರಲಿ ಎಂಬುವುದು ಎಲ್ಲರ ಅಪೇಕ್ಷಿಯಾಗಿತ್ತು. ಅದರಂತೆ, ಕ್ಲೀನ್ ಚಿಟ್ ಸಿಕ್ಕಿದೆ. ಸದ್ಯ ಸಚಿವ ಸ್ಥಾನ ನೀಡುವ ತೀರ್ಮಾನ ಕೇಂದ್ರ ನಾಯಕರದ್ದು ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಲಾಲ್ ಕೃಷ್ಣ ಅಡ್ವಾಣಿಯವರು ಅಯೋಧ್ಯೆ ರಥಯಾತ್ರೆ ಮಾಡಿದರು. ಅದು ಯಶಸ್ವಿಯಾಯಿತು. ನರೇಂದ್ರ ಮೋದಿ, ಮುರುಳಿ ಮನೋಹರ್ ಜೋಷಿ ತಿರಂಗ ಯಾತ್ರೆ ಮಾಡಿದರು. ಲಾಲ್ ಚೌಕ್‌ನಲ್ಲಿ ಹಾರುತ್ತಿದ್ದ ಪಾಕಿಸ್ತಾನ ಧ್ವಜ ತೆಗೆದು, ತ್ರಿವರ್ಣ ಧ್ವಜ ಹಾರಿಸಿದರು. ನಮ್ಮ ಯಾತ್ರೆಗಳು ಗುರಿ ಇಟ್ಟುಕೊಂಡು ಮಾಡಿರುವುದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದೇ ಭಾರತ್ ಜೋಡೋ ಯಾತ್ರೆಯ ಗುರಿ ಎಂದು ಹೇಳಿದರು.