ನ್ಯೂಸ್

18 ಸದಸ್ಯರ ಅಮಾನತು ನನಗೂ ಬೇಸರವಿದೆ: ಖಾದರ್|Suspension

ಬೆಂಗಳೂರು: ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ ಕಾರಣ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದ್ದು, ಅವರು ವಿನಂತಿ ಮಾಡಿಕೊಂಡರೆ ಅಮಾನತು ಅವಧಿ ಕಡಿತದ ಬಗ್ಗೆ ಚರ್ಚಿಸಬಹುದು(A reduction in the suspension period can be discussed upon requestಎಂದು ಸ್ಪೀಕರ್ ಯು.ಟಿ.ಖಾದರ್(U T Khadar) ಹೇಳಿದರು.

ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಘಟನೆ ನಡೆದಾಗ ತೀರ್ಮಾನ ತೆಗೆದುಕೊಳ್ಳಲಾಗಿದೆಯೇ ಹೊರತು ಸರ್ಕಾರದ ಒತ್ತಡಕ್ಕೆ ಮಾಡಿದ್ದಲ್ಲ. ಅವರು ತಿದ್ದಿಕೊಳ್ಳಬೇಕು ಎಂದು ಮಾಡಿದ್ದೇವೆ. ನಾವು ತಪ್ಪು ಮಾಡಿದ್ದೇವೆ ಎನ್ನುವ ಭಾವನೆ ಅವರಿಗಿಲ್ಲ. ತಪ್ಪಿನ ಅರಿವು ಅವರಿಗೆ ಬರಬೇಕಿತ್ತಲ್ಲವೆ? ಇಂತಹ ವರ್ತನೆ ಸರಿಯಾಗಬೇಕು. ಅವರಿಗೆ ಶಿಸ್ತು ಕಲಿಸುವ ಪ್ರಯತ್ನ ಇದಾಗಿದೆ ಎಂದರು.

ಹನಿಟ್ರ್ಯಾಪ್ ವಿಚಾರ ಕುರಿತು ಏಕಾಏಕಿ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿದರು. ಆಗ ಗೃಹ ಸಚಿವರು ಉತ್ತರ ಕೊಟ್ಟರು. ಈ ರೀತಿ ಆಗಬಾರದು ಎಂದು ಎಲ್ಲರೂ ಹೇಳಿದರು.

ದೂರು ಬಂದ ತಕ್ಷಣ ತನಿಖೆ ಎಂದು ಹೇಳಿದರು. ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಎಂದು ಹೇಳಿದರು. ಮರು ದಿವಸ ಬೆಳಗ್ಗೆ ಸಿಎಂ, ಗೃಹ ಸಚಿವರು ಇಂತಹ ಪ್ರಕರಣಗಳಿಗೆ ಇತಿಶ್ರೀ ಹಾಡುತ್ತೇವೆ ಎಂದು ಹೇಳಿದರು. ಕೆಲವರು ಸಿಬಿಐ, ಸಿಟ್ಟಿಂಗ್ ಜಡ್ಜ್ ತನಿಖೆ ಮಾಡಿ ಅಂದರು. ಸಲಹೆ ಸ್ವೀಕರಿಸುವುದಾಗಿ ಸಿಎಂ ಹೇಳಿದರು. ಅದನ್ನು ಕೇಳದೇ ಕೆಲವು ಸದಸ್ಯರು ಅಡ್ಡಿಪಡಿಸಿ, ನಿಯಮ ಉಲ್ಲಂಘನೆ ಮಾಡಿದರು. ಅದಕ್ಕೆ ಅವರನ್ನು ಅಮಾನತು ಮಾಡಲಾಯಿತು ಎಂದರು.

ವಿಧೇಯಕ ಹಾಳೆ ಹರಿದು ಮುಖಕ್ಕೆ ಬೀಸಿ ಹಾಕಿದರು. ಫೈನಾನ್ಸ್ ಬಿಲ್ಗೆ ಅಡ್ಡಿ ಪಡಿಸಿದ್ದು ಸರಿಯೇ? ಇವರ ಗದ್ದಲ ನಿಲ್ಲಿಸಿದ್ದರೆ ಏನಾಗುತ್ತಿತ್ತು? ಇದು ನಾನೊಬ್ಬ ಆಲೋಚನೆ ಮಾಡುವ ವಿಚಾರವಲ್ಲ. ಸಂವಿಧಾನಕ್ಕೆ ಗೌರವ ತರುವ ಕೆಲಸ ಆಗಬೇಕು. ಅದಕ್ಕೆ ನಾವು ಅಮಾನತು ಮಾಡಿದ್ದು. ಮುಂದೆ ಬರುವವರಿಗೂ ಇದು ಪಾಠ ಆಗಬೇಕು ಎಂದು ಹೇಳಿದರು.

ಅಮಾನತಿನ ಬಗ್ಗೆ ನನಗೂ ನೋವಿದೆ. ಆದರೆ ನಾನು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದಲ್ಲವೆ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.