ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಶಾಸಕರು 500 ಕೋಟಿ ರೂ. ಅನುದಾನ ಪಡೆಯುತ್ತಿದ್ದಾರೆ. ನಾವು (ಉತ್ತರ ಕರ್ನಾಟಕ) ಅಭಿವೃದ್ಧಿಯಲ್ಲಿ ಹಿಂದುಳಿದ್ದೇವೆ. ಹಾಗಾಗಿ ಈ ಭಾಗದವರು ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ತಪ್ಪೇನಿಲ್ಲ. ಇದಕ್ಕೆ ನನ್ನ ಸಹಮತ ಇರುತ್ತದೆ ಎಂದು ಕಾಗವಾಡ MLA, ವಾಕರಸಾ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ ಹೊರತು ಪಡಿಸಿದರೆ ಉತ್ತರ ಕರ್ನಾಟಕ ಭಾಗದ ಹಳ್ಳಿಗಳು ಸಾಕಷ್ಟು ಹಿಂದುಳಿದಿವೆ. ಹಾಗಾಗಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ನೀಡಿದಂತೆ ನಮಗೂ ವಿಶೇಷ ಅನುದಾನ ನೀಡಬೇಕು ಎಂದರು.
CM ಆಗುವ ಅವಕಾಶವೂ ಇದೆ!
ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ನಾನು 5 ಬಾರಿ ಶಾಸಕನಾಗಿದ್ದು, ಸಚಿವ ಏಕೆ? ಮುಖ್ಯಮಂತ್ರಿ ಆಗುವ ಅವಕಾಶವು ಇದೆ. ವಯಸ್ಸಿನಲ್ಲಿ ನನಗಿಂತ ಕಿರಿಯರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ದಿನೇಶ ಗುಂಡೂರಾವ್ ಸಚಿವರಾಗಿದ್ದಾರೆ. ನಾವು ಅವರಿಗಿಂತ ಸಮರ್ಥ ಇದ್ದೇನೆ. ಸಚಿವ ಸ್ಥಾನ ನೀಡಿದರೆ ಅವರಿಗಿಂತ ಸಮರ್ಥವಾಗಿ ನಿಭಾಯಿಸಬಲ್ಲೆ. ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.