ನ್ಯೂಸ್

ಸ್ತನ ಕ್ಯಾನ್ಸರ್ ಜಾಗೃತಿಗೆ ಪಿಂಕ್​ ಆದ ಚಾರ್ ಮಿನಾರ್​..!

ಹೈದರಾಬಾದ್​: ಹೈದರಾಬಾದ್​ನ ಐತಿಹಾಸಿಕ ಹೆಗ್ಗುರುತು ಚಾರ್​ಮಿನಾರ್​, ಹುಸೇನ್​ ನಗರ ಲೇಕ್​ನ ಬುದ್ಧ ಪ್ರತಿಮೆ, ಇಲ್ಲಿನ ಕಿಮ್ಸ್​ ಆಸ್ಪತ್ರೆ ಕಟ್ಟಡ ಎಲ್ಲವೂ ಬಣ್ಣ ಬದಲಾಯಿಸಿವೆ. ಇರುಳಿನಲ್ಲಂತೂ ಆಕರ್ಷಕ ಪಿಂಕ್​ ಬಣ್ಣದಿಂದ ಇವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ಕಾರಣ, ಕ್ಯಾನ್ಸರ್​.

ಹೌದು.. ಸ್ತನ ಕ್ಯಾನ್ಸರ್ ಜಾಗೃತಿ ಸಲುವಾಗಿ ಹೈದರಾಬಾದ್​ನಲ್ಲಿ ತಿಂಗಳಿಡೀ ವಿಶೇಷ ಕಾರ್ಯಕ್ರಮಗಳು, ಅಭಿಯಾನಗಳು ನಡೆಯಲಿದ್ದು, ಅದರ ಅಂಗವಾಗಿ ನಗರದೆಲ್ಲೆಡೆ ಪಿಂಕ್​ ಕಲರ್​ ಕಂಗೊಳಿಸುತ್ತಿದೆ. ಹೈದರಾಬಾದ್​ನಲ್ಲಿ ಬುಧವಾರದಿಂದಲೇ ಈ ಬದಲಾವಣೆ ಕಂಡುಬಂದಿದೆ.

ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ ಸೂಕ್ತ ಚಿಕಿತ್ಸೆ ನೀಡಬಹುದು. ಹೀಗಾಗಿ ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್ ಪತ್ತೆ ಮಾಡಲು ಹಾಗೂ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್​ ತಿಂಗಳಾದ್ಯಂತ ಈ ಪಿಂಕ್​ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಉಷಾಲಕ್ಷ್ಮೀ ಬ್ರೆಸ್ಟ್​ ಕ್ಯಾನ್ಸರ್ ಫೌಂಡೇಷನ್​ (ಯುಬಿಎಫ್​) ತನ್ನ ಹತ್ತನೇ ವರ್ಷದ ಪ್ರಯುಕ್ತ ಈ ಅಭಿಯಾನವನ್ನು ವಿಶೇಷವಾಗಿ ಆಯೋಜಿಸಿದೆ.

ಅಕ್ಟೋಬರ್ ತಿಂಗಳನ್ನು ಅಂತಾರಾಷ್ಟ್ರೀಯ ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ. ವೈಟ್​ ಹೌಸ್​, ಎಂಪೈರ್ ಸ್ಟೇಟ್​ ಬಿಲ್ಡಿಂಗ್​, ಬಕಿಂಗ್​ಹ್ಯಾಂ ಪ್ಯಾಲೇಸ್​, ಲಂಡನ್​ ಐಫೆಲ್​ ಟವರ್​ ಸೇರಿ ವಿದೇಶದ ಹಲವು ಸ್ಮಾರಕಗಳಲ್ಲೂ ಈ ತಿಂಗಳಲ್ಲಿ ಪಿಂಕ್ ಮೆರುಗು ಕಾಣಿಸಲಿದೆ. ಬಣ್ಣದ ಮುಖೇನ ಮೂಡಿಸುವ ಈ ಜಾಗೃತಿ 2000ರಲ್ಲೇ ಆರಂಭಗೊಂಡಿತ್ತು ಎಂದು ಯುಬಿಎಫ್ ತಿಳಿಸಿದೆ. (ಏಜೆನ್ಸೀಸ್​)