ನ್ಯೂಸ್

ಲಹರಿ ಸಾವನ್ನಪ್ಪಿದ್ದು ಹೃದಯಾಘಾತದಿಂದ ಅಲ್ಲ, ಮರಣೋತ್ತರ ವರದಿಯಲ್ಲಿ ಬಯಲಾಯ್ತು ಸತ್ಯ; ಕಾಂಗ್ರೆಸ್ ಮುಖಂಡನ ಪುತ್ರನ ಬಂಧನ

ಹೈದರಾಬಾದ್: ನಲ್ಗೊಂಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ರಂಗಸಾಯಿ ರೆಡ್ಡಿ ಅವರ ಪುತ್ರ ವಲ್ಲಭರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ವಲ್ಲಭರೆಡ್ಡಿ ಪತ್ನಿ ಲಹರಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ವಲ್ಲಭರೆಡ್ಡಿಯನ್ನು ಬಂಧಿಸಿದ್ದಾರೆ. ಲಹರಿ ಸಾವಿನ ಪ್ರಕರಣದ ತನಿಖೆ ಇದೀಗ ಸಂಚಲನ ಮೂಡಿಸಿದೆ. ಏಕೆಂದರೆ ಲಹರಿಯ ಸಾವನ್ನು ಹೃದಯಾಘಾತ ಎಂದು ಬಿಂಬಿಸಿದ ವಲ್ಲಭ ರೆಡ್ಡಿ, ಪೊಲೀಸರಿಗೆ ದಾರಿತಪ್ಪಿಸಿರುವುದು ಕೊನೆಗೂ ತಿಳಿದಿದೆ. ಪೊಲೀಸರ ಪ್ರಕಾರ, ಲಹರಿ ರೆಡ್ಡಿ ಅವರ ಹೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದಿರುವುದಲ್ಲದೆ, ಅವರ ತಲೆ ಗೋಡೆ ಮತ್ತು ಬಾಗಿಲಿಗೆ ಬಲವಾಗಿ ಬಡಿದಿದೆ. ಇದರಿಂದ ಲಹರಿ ರೆಡ್ಡಿ ಸಾವನ್ನಪ್ಪಿದ್ದಾರೆ.

ಅಸಲಿಗೆ ಏನಾಯಿತು..?
ನಲ್ಗೊಂಡ ಜಿಲ್ಲೆಯ ನಿಡಮನೂರಿನ ಕಾಂಗ್ರೆಸ್ ಮುಖಂಡ ರಂಗಸಾಯಿ ರೆಡ್ಡಿ ಅವರ ಪುತ್ರ ವಲ್ಲಭ ರೆಡ್ಡಿ (30) ಮತ್ತು ಅವರ ಪತ್ನಿ ಲಹರಿ (27) ಹಿಮಾಯತ್ ನಗರದಲ್ಲಿ ವಾಸವಾಗಿದ್ದಾರೆ. ಕೆಲ ದಿನಗಳಿಂದ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಮದುವೆಯಾಗಿ ಒಂದು ವರ್ಷದ ಬಳಿಕ ಇದೇ ತಿಂಗಳ 13ರ ರಾತ್ರಿ ಲಹರಿಗೆ ವಲ್ಲಭರೆಡ್ಡಿ ತೀವ್ರವಾಗಿ ಥಳಿಸಿದ್ದಾರೆ. ಈ ಸಮಯದಲ್ಲಿ ಲಹರಿ ತಲೆ ಗೋಡೆಗೆ ಮತ್ತು ಬಾಗಿಲಿಗೆ ಬಡಿದಿದೆ. ಲಹರಿ ಹೊಟ್ಟೆಗೆ ಕಾಲಿನಿಂದ ಒದ್ದಾಗ ಎರಡೂವರೆ ಲೀಟರ್ ರಕ್ತ ಸುರಿದಿದೆ. ಆದರೆ ಪತ್ನಿ ಮೃತಪಟ್ಟಿರುವುದನ್ನು ಕಂಡು ಅನುಮಾನ ಬರದಂತೆ ಆಕೆಯನ್ನು ಹೃದಯಾಘಾತ ಎಂಬ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲರೂ ಲಹರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದೇ ನಂಬಿದ್ದರು. ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು. ಇದೇ ತಿಂಗಳ 24ರಂದು ಪತ್ನಿಯ ವಿಧಿವಿಧಾನ ನೆರವೇರಿತು. ಅಂದು ವಲ್ಲಭರೆಡ್ಡಿ 10 ಸಾವಿರ ಜನರಿಗೆ ಊಟ ಬಡಿಸಿ ಏನೂ ಗೊತ್ತಿಲ್ಲದಂತೆ ನಟಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸತ್ಯಾಂಶ ಬಯಲಾಗಿದೆ. ವಲ್ಲಭನ ಹೊಡೆತದಿಂದ ಲಹರಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ದೃಢಢಪಡಿಸಿದ್ದಾರೆ. ಲಹರಿಯ ತಲೆಯ ಮೇಲೆ ಗಾಯಗಳು ಕಾಣಿಸುತ್ತಿದ್ದರೂ ಪೋಷಕರು ಯಾವುದೇ ಅನುಮಾನ ವ್ಯಕ್ತಪಡಿಸಲಿಲ್ಲ. ಆದರೆ, ಲಹರಿಯ ಪೋಷಕರಿಗೆ ವಲ್ಲಭ ಬೆದರಿಕೆ ಹಾಕಿರುವ ಶಂಕೆ ವ್ಯಕ್ತವಾಗಿದೆ.