ಹೈದರಾಬಾದ್: ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿ, ಅತ್ತೆ ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಮಗನ ಎದುರೇ ಥಳಿಸಿರುವ ಆರೋಪ ಎದುರಿಸುತ್ತಿರುವ ತೆಲಂಗಾಣದ ವಾನಪಾರ್ಥಿಯ ಟ್ರಾಫಿಕ್ ಪೊಲೀಸ್‌ನನ್ನು ಅಮಾನತು ಮಾಡಲಾಗಿದೆ.
ತಂದೆಗೆ ಹೊಡೆಯುವುದನ್ನು ನೋಡಲಾಗದೇ 10 ವರ್ಷದ ಮಗು ಹೊಡೆಯದಂತೆ ಎಷ್ಟೇ ಬೇಡಿಕೊಂಡರೂ ಕೇಳದ ಪೊಲೀಸ್ ಯರ್ರಾಬಿರ್ರಿ ಥಳಿಸಿದ್ದ ವೀಡಿಯೋ ವೈರಲ್ ಆಗಿತ್ತು.
ನಿನ್ನೆ ನಡೆದ ಘಟನೆಯ ವೀಡಿಯೋ ನೋಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿಆರ್ ರಾವ್ ಟ್ವೀಟ್ ಮಾಡುವ ಮೂಲಕ ಈ ಕೃತ್ಯವನ್ನು ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರಿಂದ ಇಂಥ ದೌರ್ಜನ್ಯವನ್ನು ಸಹಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.
ಥಳಿತಕ್ಕೆ ಒಳಗಾಗಿರುವ ವ್ಯಕ್ತಿಯ ಹೆಸರು ಮುರಳಿ ಕೃಷ್ಣ ಎನ್ನಲಾಗಿದೆ. ಬೈಕ್‌ನಲ್ಲಿ ಇವರು ಮಗನನ್ನು ಕಳ್ಳರಿಸಿಕೊಂಡು ಹೋಗುತ್ತಿದ್ದರು. ಲಾಕ್‌ಡೌನ್ ಇದ್ದ ಹಿನ್ನೆಲೆಯಲ್ಲಿ, ಅವರನ್ನು ಟ್ರಾಫಿಕ್ ಪೊಲೀಸ್ ತಡೆದಿದ್ದಾರೆ. ತಾವು ಅತ್ತೆ ಮನೆಗೆ ಹೋಗುತ್ತಿರುವುದಾಗಿ ಮುರಳಿ ಹೇಳಿದ್ದಾರೆ. ‘ಇಂಥ ಸಂದರ್ಭದಲ್ಲಿ ಹೋಗಬಾರದು ಎಂದು ನಾನು ಹೇಳಿದರೂ ಅವರು ನನ್ನ ಮೇಲೆ ರೇಗಿದರು ಮಾತ್ರವಲ್ಲದೇ ನನ್ನ ಮಾತನ್ನು ಕೇಳಲಿಲ್ಲ. ಅದೇ ಸಮಯದಲ್ಲಿ ಸ್ಥಳದಲ್ಲಿ ಇದ್ದ ಕಾನ್‌ಸ್ಟೆಬಲ್ ಅಶೋಕ್ ಕುಮಾರ್, ಕೃಷ್ಣ ಅವರ ವಾಹನದ ಸಂಖ್ಯೆಯನ್ನು ಪರಿಶೀಲಿಸಿದಾಗ, ಅವರು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2,820 ರೂಪಾಯಿ ಪಾವತಿ ಮಾಡುವುದನ್ನು ಬಾಕಿ ಉಳಿಸಿಕೊಂಡಿದ್ದರು. ಇದನ್ನು ಹೇಳಿದ ಮೇಲೂ ಮುರಳಿ ಕೃಷ್ಣ ಕ್ಯಾತೆ ತೆಗೆದಿದ್ದರಿಂದ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ. (ಏಜೆನ್ಸೀಸ್)