ಹೈದರಾಬಾದ್: ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಶಿರ ಕಡಿದು, ಅದನ್ನು ತೆಗೆದುಕೊಂಡು ಹೋಗಿ ಪೊಲೀಸರ ಎದುರು ಶರಣಾದ ಪತಿಯ ಸುದ್ದಿಯನ್ನು ಇತ್ತೀಚೆಗಷ್ಟೇ ಓದಿದ್ದೇವೆ.
ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ಆದರೆ ಇದು ಸ್ವಲ್ಪ ವಿಭಿನ್ನ ಕ್ರೈಂ. ಇನ್ನೋರ್ವನೊಂದಿಗೆ ಸಂಬಂಧ ಹೊಂದಿದ್ದ ಪತ್ನಿಯ ತಲೆ ಕಡೆದ ಈ ವ್ಯಕ್ತಿ, ಶಿರವನ್ನು ತೆಗೆದುಕೊಂಡು ಹೋಗಿ ಪತ್ನಿಯ ಪ್ರಿಯತಮನ ಮನೆ ಬಾಗಿಲಿನಲ್ಲಿ ಇಟ್ಟಿದ್ದಾನೆ.
ಜುರ್ರು ಸಯಿಲು ಎಂಬಾತ ತನ್ನ ಪತ್ನಿ ಅಂಶಮ್ಮ (35)ನೊಂದಿಗೆ ಅನಂತಸಾಗರ ಗ್ರಾಮದಲ್ಲಿ ವಾಸವಾಗಿದ್ದ. ಪತ್ನಿ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಸದಾ ಜಗಳ ಆಗುತ್ತಿತ್ತು. ಬುಧವಾರ ರಾತ್ರಿ ಕೂಡ ದಂಪತಿಯ ಮಧ್ಯೆ ಜಗಳ ಆಗಿದೆ. ಸಿಟ್ಟಿಗೆದ್ದ ಜುರ್ರು ಕೊಡಲಿಯಿಂದ ಪತ್ನಿಯ ತಲೆ ಕಡಿದಿದ್ದಾನೆ. ಅದನ್ನು ಬೈಕ್ನಲ್ಲಿ ತೆಗೆದುಕೊಂಡು ಹೋಗಿ, ಆಕೆಗೆ ಸಂಬಂಧವಿದೆ ಎನ್ನಲಾದ ವ್ಯಕ್ತಿಯ ಮನೆ ಬಾಗಿಲಿನಲ್ಲಿ ಇಟ್ಟಿದ್ದಾನೆ. ನಂತರ ಮುಂಡವನ್ನು ಒಂದು ಪೊದೆಯಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯನ್ನು ಕೊಂದ ಬಳಿಕ ಜುರ್ರು ಹೋಗಿ ಪೊಲೀಸರ ಎದುರು ಶರಣಾಗಿದ್ದಾನೆ. (ಏಜೆನ್ಸೀಸ್)