ನ್ಯೂಸ್

ಗಂಡ-ಹೆಂಡತಿ ಜಗಳಕ್ಕೆ ದುರಂತ ಅಂತ್ಯ; ಪತ್ನಿಯ ಕತ್ತು ಕುಯ್ದು ಸಾವಿನ ಹಾದಿ ಹಿಡಿದ

ರಾಮನಗರ: ಕೋವಿಡ್​ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಹಿಂತಿರುಗಿ ವಾಸಿಸುತ್ತಿದ್ದ ದಂಪತಿಯ ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡಿದೆ. ಪತ್ನಿಯ ಕತ್ತು ಕೊಯ್ದಿರುವ ಗಂಡ ನಂತರ ತಾನೂ ನೇಣಿಗೆ ಕೊರಳೊಡ್ಡಿ ಸಾವಪ್ಪಿರುವ ದಾರುಣ ಘಟನೆ ರಾಮನಗರದಿಂದ ವರದಿಯಾಗಿದೆ.

ರಾಮನಗರ ‌ಜಿಲ್ಲೆಯ ಕನಕಪುರ ತಾಲೂಕಿನ ಗುಡ್ಡ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಇಂದ್ರಮ್ಮ(35) ಕೊಲೆಯಾದ ಮಹಿಳೆ, ದೇಸಿಗೌಡ(40) ನೇಣಿಗೆ ಶರಣಾದ ವ್ಯಕ್ತಿ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

18 ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿದ್ದ ಮೃತ ದಂಪತಿ, ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಾಪಸ್ ಬಂದು ನೆಲೆಸಿದ್ದರು. ಆದರೆ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ದೇಸಿಗೌಡ, ಹೆಂಡತಿ ಇಂದ್ರಮ್ಮ ಮಲಗಿದ್ದ ವೇಳೆ ಚಾಕುವಿನಿಂದ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ. ನಂತರ‌ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.