ಬೆಂಗಳೂರು : ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪತಿ, ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಚಂದ್ರಾಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಡಲಪಾಳ್ಯ ಸಮೀಪದ ಶಿವಾನಂದನಗರದ ಗೀತಾ (33) ಮೃತ ಮಹಿಳೆ. ಈ ಸಂಬಂಧ ಮೃತಳ ಪತಿ ಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಬುಧವಾರ ರಾತ್ರಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಶಂಕರ್ ಕೊಲೆ ಮಾಡಿದ್ದ. ಆನಂತರ ಮಗಳನ್ನು ಕೊಲೆ ಮಾಡಿರುವುದಾಗಿ ಮೃತಳ ತಾಯಿಗೆ ಕರೆ ಮಾಡಿ ತಿಳಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13 ವರ್ಷಗಳ ಹಿಂದೆ ತಮಿಳುನಾಡಿನ ಹೊಸೂರು ಮೂಲದ ಗೀತಾ ಮತ್ತು ಶಂಕರ್ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಿವಾನಂದನಗರದಲ್ಲಿ ಶಂಕರ್ ಕುಟುಂಬ ನೆಲೆಸಿತ್ತು. ಕೆಲ ದಿನಗಳಿಂದ ಪರಪರುಷನ ಜತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕರ್ ಅನುಮಾನ ಹೊಂದಿದ್ದ. ಇದೆ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಬುಧವಾರ ರಾತ್ರಿ ಸಹ ಸತಿ-ಪತಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ತಮಿಳುನಾಡಿನ ಹೊಸೂರಿನಲ್ಲಿ ಕಲ್ಯಾಣ ಮಂಟಪಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಮೃತ ಗೀತಾಳ ತಾಯಿ ರತ್ನಮ್ಮ, ಬುಧವಾರ ಮಗಳ ಮನೆಗೆ ಬಂದು ಯೋಗ ಕ್ಷೇಮ ವಿಚಾರಿಸಿ ಕೆಲಸಕ್ಕೆ ಹೋಗಿದ್ದಳು. ರಾತ್ರಿ 11 ಗಂಟೆ ಹೊತ್ತಿಗೆ ಗೀತಾಳನ್ನು ಕೊಲೆ ಮಾಡಿದ ಪತಿ, ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದ. ವಾಪಸ್ ತಾಯಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರತ್ನಮ್ಮ ಕೊಟ್ಟ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.