Arrest of murder suspects 
ನ್ಯೂಸ್

ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕೌಟುಂಬಿಕ ಕಲಹದಿಂದ ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ.

ಹೆಮ್ಮೆಗೆಪುರ ಸಮೀಪ ಕಾಳಪ್ಪ ಲೇಔಟ್ ನಿವಾಸಿ ಭಾಗ್ಯ (42) ಮೃತ ಗೃಹಿಣಿ. ಈಕೆಯನ್ನು ಕೊಲೆ ಮಾಡಿದ ಪತಿ ಶ್ರೀರಾಮ್ (50) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ಮಧ್ಯಾಹ್ನ 4.15ರಲ್ಲಿ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾಗ್ಯ ಮತ್ತು ಶ್ರೀರಾಮ್ ದಂಪತಿಗೆ 22 ವರ್ಷದ ಪುತ್ರ ಮತ್ತು 20 ವರ್ಷದ ಮಗಳು ಇದ್ದಾರೆ. ಭಾಗ್ಯ ಗೃಹಿಣಿ ಆಗಿದ್ದು, ಶ್ರೀರಾಮ್ ಇತ್ತೀಚೆಗೆ ಮದ್ಯದ ವ್ಯಸನಿಯಾಗಿದ್ದು, ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರಿಂದ ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಶ್ರೀರಾಮ್‌ನ್ನು ಸೇರಿಸಿದ್ದು, ಒಂದು ತಿಂಗಳ ಹಿಂದೆಯಷ್ಟೇ ವಾಪಸ್ ಮನೆಗೆ ಬಂದಿದ್ದ. ಆದರೂ ಮದ್ಯ ಸೇವನೆ ಮಾಡುವುದು ಬಿಟ್ಟಿರಲಿಲ್ಲ. ಮಧ್ಯಾಹ್ನ ಮಗ ಮತ್ತು ಮಗಳು ಹೊರಗೆ ಹೋಗಿದ್ದಾಗ ದಂಪತಿ ನಡುವೆ ಜಗಳವಾಗಿದೆ.

ಮಾತಿಗೆ ಮಾತು ಬೆಳೆದು ಶ್ರೀರಾಮ್, ರಾಡ್‌ನಿಂದ ಭಾಗ್ಯ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕೃತ್ಯ ಎಸಗಿದ ಮೇಲೆ ಶ್ರೀರಾಮ್ ಪರಾರಿಯಾಗಿದ್ದ. ಅಕ್ಕಪಕ್ಕದ ಮನೆಯವರು ನೋಡಿ ಮಗನಿಗೆ ವಿಷಯ ಮುಟ್ಟಿಸಿದ್ದರು. ಮನೆಗೆ ಬಂದು ನೋಡುವಷ್ಟರಲ್ಲಿ ಭಾಗ್ಯ ಅಸುನೀಗಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.

ತನ್ನ ತಾಯಿಯನ್ನು ತಂದೆ ಶ್ರೀರಾಮ್ ಕೊಲೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಕರು ಇಬ್ಬರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಭಾಗ್ಯ ಅವರ ಪುತ್ರ ದೂರು ಕೊಟ್ಟಿದ್ದಾರೆ. ಇದರ ಮೇರೆಗೆ ತಲಘಟ್ಟಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.