| ಅವಿನಾಶ ಮೂಡಂಬಿಕಾನ ಬೆಂಗಳೂರು
ಅವರಿಬ್ಬರೂ ಪ್ರೀತಿಸಿ ಮದುವೆಯಾದವರು. ಸದಾ ಮೊಬೈಲ್ನಲ್ಲೇ ಬಿಜಿಯಾಗಿರುತ್ತಿದ್ದ ಗಂಡ, ಹೊತ್ತಲ್ಲದ ಹೊತ್ತಲ್ಲಿ ಮನೆಯಿಂದ ಹೊರಹೋಗುತ್ತಿದ್ದ. ಅನುಮಾನದ ಮೇರೆಗೆ ಆತನ ಲ್ಯಾಪ್ಟಾಪ್ ಪರಿಶೀಲಿಸಿದಾಗ ಅಪರಿಚಿತ ಮಹಿಳೆಯರಿಗೆ ನೂರಾರು ಬೆತ್ತಲೆ ಫೋಟೋ ಕಳುಹಿಸಿರುವುದು ಪತ್ತೆಯಾಗಿದ್ದು, ತನ್ನ ಪತಿ ‘ಕಾಲ್ಬಾಯ್’ (ಗಂಡು ವೇಶ್ಯೆ) ಎಂಬ ರಹಸ್ಯ ಬಯಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹದೊಂದು ಗಂಡು ವೇಶ್ಯೆ ಪ್ರಕರಣ ಠಾಣೆ ಮೆಟ್ಟಿಲೇರಿದ್ದು, ವಿವಾಹವಾಗಿ ಒಂದೂವರೆ ವರ್ಷದ ಬಳಿಕ ಪತಿಯ ಅಸಲಿ ಮುಖ ಬಹಿರಂಗಗೊಂಡಿದೆ.
ಉತ್ತರ ಭಾರತ ಮೂಲದ 24 ವರ್ಷದ ಮಹಿಳೆಯ ಕುಟುಂಬ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಈಕೆ ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾಳೆ. 2 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಉತ್ತರ ಭಾರತ ಮೂಲದ ಕಾಲ್ಸೆಂಟರ್ ಉದ್ಯೋಗಿಯ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದ್ದರಿಂದ ಎರಡೂ ಕುಟುಂಬಸ್ಥರ ಸಮ್ಮುಖ 2018ರಲ್ಲಿ ವಿವಾಹವಾಗಿತ್ತು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿಯೇ ಇದ್ದರೂ ನಂತರ ಸಣ್ಣ-ಪುಟ್ಟ ವಿಚಾರಕ್ಕೂ ಪತಿ ಕಿರುಕುಳ ಕೊಡಲು ಆರಂಭಿಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಗಂಟೆಗೆ 3-5 ಸಾವಿರ ರೂ. ಚಾರ್ಜ್: ಕಾಲ್ಬಾಯ್ ಪತಿಯ ಹಿನ್ನೆಲೆ ಕೆದಕಿದಾಗ ಕಳೆದ 6 ವರ್ಷಗಳಿಂದ ಆತ ಇದೇ ವೃತ್ತಿಯಲ್ಲಿ ತೊಡಗಿರುವುದು ಬಹಿರಂಗಗೊಂಡಿದೆ. ವೆಬ್ಸೈಟ್ವೊಂದರಲ್ಲಿ ತನ್ನ ನಂಬರ್ ಹಾಕಿದ್ದ. ತಾನು ಅವಿವಾಹಿತನಾಗಿದ್ದು, ಆಸಕ್ತ ಮಹಿಳೆಯರು ಸಂಪರ್ಕಿಸಬಹುದು ಎಂದು ನಮೂದಿಸಿದ್ದ. ಇದನ್ನು ಗಮನಿಸಿ ಈತನನ್ನು ಸಂರ್ಪಸುತ್ತಿದ್ದ ಮಹಿಳೆಯರಿಗೆ ವಾಟ್ಸ್ಆಪ್ ಮೂಲಕ ಬೆತ್ತಲೆ ಫೋಟೊ ಕಳಿಸಿ ಗಂಟೆಗೆ 3ರಿಂದ 5 ಸಾವಿರ ರೂ. ಚಾರ್ಜ್ ಆಗುತ್ತದೆ ಎಂದು ಹೇಳುತ್ತಿದ್ದ. ಮಹಿಳೆಯರು ‘ಯೆಸ್’ ಎಂದು ಮರುಸಂದೇಶ ಕಳಿಸಿ ವಿಳಾಸ ನೀಡಿದರೆ ಅಲ್ಲಿಗೆ ಹೋಗಿ ಅವರ ಕಾಮನೆ ಈಡೇರಿಸುತ್ತಿದ್ದ.
ಪರಿಹಾರ್ ಕೇಂದ್ರಕ್ಕೆ ದೂರು: ನೊಂದ ಪತ್ನಿ ಜ.13ರಂದು ಪರಿಹಾರ್ ಮಹಿಳಾ ಕೌಟುಂಬಿಕ ಸಲಹಾ ಕೇಂದ್ರದಲ್ಲಿರುವ ಹಿರಿಯ ಆಪ್ತ ಸಮಾಲೋಚಕಿ ಬಿ.ಎಸ್.ಸರಸ್ವತಿ ಸಂರ್ಪಸಿ ಸಮಸ್ಯೆ ಹೇಳಿಕೊಂಡಿದ್ದಳು. ಕಚೇರಿಗೆ ಕರೆಸಿ ಪತಿ ವಿಚಾರಣೆ ನಡೆಸಿದಾಗ, ಇದು ನಿಜ ಸಂಗತಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಸಂತ್ರಸ್ತೆ ಪತಿಯಿಂದ ವಿಚ್ಛೇದನ ಪಡೆಯಲು ಕೋರ್ಟ್ ಮೋರೆ ಹೋಗಿದ್ದಾಳೆ. ಆದರೆ, ಪತಿ ಈಕೆಯೊಂದಿಗೆ ಸಂಸಾರ ಮುಂದುವರಿಸುವುದಾಗಿ ಹೇಳುತ್ತಿದ್ದಾನೆ.
ವಿವಾಹಿತ ಮಹಿಳೆಯರೇ ಹೆಚ್ಚು!: 6 ವರ್ಷಗಳಲ್ಲಿ ಈತನನ್ನು ಸಂರ್ಪಸಿದ ಮಹಿಳೆಯರ ಪೈಕಿ ಹೆಚ್ಚಿನವರು ವಿವಾಹಿತರೇ ಆಗಿದ್ದಾರೆ. ಕೆಲ ಯುವತಿಯರೂ ಈತನನ್ನು ಕರೆಸಿಕೊಂಡಿರು ವುದು ಬೆಳಕಿಗೆ ಬಂದಿದೆ. ಈತನನ್ನು ಬಳಸಿಕೊಂಡ ಕೆಲ ಮಹಿಳೆಯರು ತಮ್ಮ ಸ್ನೇಹಿತೆಯರಿಗೂ ಪರಿಚಯಿಸಿದ್ದರು. ಹೀಗಾಗಿ ಈತ ನೂರಾರು ಮಹಿಳೆಯರೊಂದಿಗೆ ಅನೈತಿಕ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪತಿ ಸದಾ ಮೊಬೈಲ್ನಲ್ಲಿ ಮಾತನಾಡುವುದು, ಲ್ಯಾಪ್ಟಾಪ್ನಲ್ಲಿ ಚಾಟಿಂಗ್ ಮಾಡುವುದನ್ನು ಗಮನಿಸಿದ ಪತ್ನಿಗೆ ಈತನ ವರ್ತನೆ ಮೇಲೆ ಅನುಮಾನ ಮೂಡಿತ್ತು. ಈತನ ಮೊಬೈಲ್ ಪರಿಶೀಲಿಸಲು ಯತ್ನಿಸಿದರೂ ಪಾಸ್ವರ್ಡ್ ಹಾಕಿದ್ದರಿಂದ ಸಾಧ್ಯವಾಗಿರಲಿಲ್ಲ. ಪತಿ ಲ್ಯಾಪ್ಟಾಪ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಗ ಸಂದರ್ಭ ಸಹೋದರನ ಸಹಾಯ ಪಡೆದು ಪತ್ನಿ ಪರಿಶೀಲಿಸಲಾಗಿ, ವಿವಿಧ ಭಂಗಿಯಲ್ಲಿ ತೆಗೆದ ಪತಿಯ ನೂರಾರು ಬೆತ್ತಲೆ ಫೋಟೋಗಳು ಪತ್ತೆಯಾಗಿವೆ, ಅವುಗಳನ್ನು 25ಕ್ಕೂ ಅಧಿಕ ಮಹಿಳೆಯರಿಗೆ ಕಳಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ವಿನಾಕಾರಣ ಹಲ್ಲೆ ನಡೆಸಿ, ವೈಯಕ್ತಿಕ ವಿಚಾರಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದ.
ಇಂತಹ ಪ್ರಕರಣಗಳಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿವಾಹವಾಗುವ ಮುನ್ನ ಯುವತಿಯರು ಯುವಕನ ಪೂರ್ವಾಪರ ಪರಿಶೀಲಿಸುವುದು ಉತ್ತಮ.| ರಾಣಿ ಶೆಟ್ಟಿ ಮುಖ್ಯಸ್ಥೆ, ಪರಿಹಾರ ಮಹಿಳಾ ಕೌಟುಂಬಿಕ ಸಲಹಾ ಕೇಂದ್ರಹಣಕಾಸಿನ ಸಮಸ್ಯೆಯಿಂದ ಪಾರಾಗಲು ಸ್ನೇಹಿತನ ಸಲಹೆ ಮೇರೆಗೆ ಕಾಲ್ಬಾಯ್ ಆದೆ. ಇದಕ್ಕೆಂದೇ ಪ್ರತ್ಯೇಕ ಸಿಮ್ ಬಳಸುತ್ತಿದ್ದೆ. ಐಷಾರಾಮಿ ಜೀವನ ನಡೆಸಲು ಹಣದ ಅಗತ್ಯತೆಯಿತ್ತು ಎಂದು ಈ ಪುರುಷ ಹೇಳಿದ್ದಾನೆ.| ಬಿ.ಎಸ್.ಸರಸ್ವತಿ ಹಿರಿಯ ಆಪ್ತ ಸಮಾಲೋಚಕರು