ನ್ಯೂಸ್

ಪತ್ನಿಗೆ ಕೊಲೆ ಬೆದರಿಕೆಯೊಡ್ಡಿದ್ದ ಪತಿಗೆ ಜೈಲು ಶಿಕ್ಷೆ, ದಂಡ

ಹುಣಸೂರು: ಪತ್ನಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಲ್ಲೆಯೊಂದಿಗೆ ಕೊಲೆ ಬೆದರಿಕೆಯೊಡ್ಡಿದ್ದ ಪತಿಗೆ ಹುಣಸೂರಿನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ 5 ವರ್ಷಗಳ ಜೈಲುವಾಸ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶೆ ಅನಿತಾ ಬುಧವಾರ ಈ ತೀರ್ಪು ನೀಡಿದ್ದು, ನಗರದ ಮಂಜುನಾಥ ಬಡಾವಣೆ ನಿವಾಸಿ ಅರವಿಂದ ಜೈಲುಪಾಲಾದವರು.

ಘಟನೆ ವಿವರ: ನಗರದ ಮಂಜುನಾಥ ಬಡಾವಣೆ ನಿವಾಸಿ ಈರನಾಯಕರ ಪುತ್ರಿ ರೇಣುಕಾರನ್ನು ಮೈಸೂರಿನ ಜನತಾನಗರ ನಿವಾಸಿ ರಾಮಣ್ಣರ ಪುತ್ರ ಅರವಿಂದನಿಗೆ ಕೊಟ್ಟು 2015ರಲ್ಲಿ ಮದುವೆ ಮಾಡಲಾಗಿತ್ತು. ಮದುವೆಯಾದ ಕೆಲಕಾಲದ ನಂತರ ಪತಿ ಅರವಿಂದ ಮತ್ತು ಅತ್ತೆ ಮಹಾಲಕ್ಷ್ಮೀ ಇಬ್ವರೂ ಸೇರಿ ರೇಣುಕಾರಿಗೆ ತವರು ಮನೆಯಿಂದ ಇನ್ನಷ್ಟು ವರದಕ್ಷಿಣೆ ತರಲು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ಹಲ್ಲೆ ನಡೆಸುತ್ತಿದ್ದರು. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಬೇಸತ್ತ ರೇಣುಕಾ ಹುಣಸೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಸಿ.ಪೂವಯ್ಯ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಆರೋಪಿಗಳ ವಿರುದ್ಧ ವರದಕ್ಷಿಣೆಗಾಗಿ ಒತ್ತಾಯಿಸಿದ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಬುಧವಾರ ಆರೋಪಿಗೆ 2 ವರ್ಷ ಸಾದಾ ಶಿಕ್ಷೆಯ ಜೈಲುವಾಸ ಮತ್ತು 5 ಸಾವಿರ ರೂ.ದಂಡ, ಹಲ್ಲೆ ಮಾಡಿದ್ದಕ್ಕಾಗಿ 6 ತಿಂಗಳ ಸಾದಾ ಶಿಕ್ಷೆ ಮತ್ತು 1 ಸಾವಿರ ರೂ.ದಂಡ, ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ 6 ತಿಂಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ.ದಂಡ ಮತ್ತು ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಕ್ಕಾಗಿ 5 ವರ್ಷ 6 ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು 27,500 ರೂ. ಮತ್ತು 5 ಸಾವಿರ ರೂ. ದಂಡವನ್ನು ಪ್ರತ್ಯೇಕವಾಗಿ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ ವಾದ ಮಂಡಿಸಿದ್ದರು.