ನೌಕಾಪಡೆ ಸೇವೆ ಬಳಿಕ ಮನೆಗೆ ಬಂದ ಪತಿಗೆ ಪತ್ನಿಯ ಭಾವುಕ ಸ್ವಾಗತ 
ನ್ಯೂಸ್

15 ವರ್ಷಗಳ ನೌಕಾಪಡೆ ಸೇವೆ ಬಳಿಕ ಮನೆಗೆ ಬಂದ ಪತಿ; ‘ವೆಲ್ಕಮ್ ಹೋಮ್ ಮೈ ಹೀರೋ’ ಎಂದು ಸ್ವಾಗತಿಸಿದ ಪತ್ನಿ! | Navy Officer Welcome

ಭಾರತೀಯ ನೌಕಾಪಡೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪತಿಗೆ ಪತ್ನಿ ವಿಶೇಷವಾಗಿ ಸ್ವಾಗತ ನೀಡಿದ್ದಾರೆ. ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Indian Navy Officer Retirement: ಭಾರತೀಯ ನೌಕಾಪಡೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪತಿಗೆ ಪತ್ನಿ ವಿಶೇಷ ಸ್ವಾಗತ ನೀಡಿದ್ದಾರೆ. ‘ವೆಲ್ಕಮ್ ಹೋಮ್, ಮೈ ಹೀರೋ’ ಎಂಬ ಭಾವುಕ ಸಂದೇಶದೊಂದಿಗೆ ಪತಿಯನ್ನು ಬರಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

ಮನೆಗೆ ಬಂದ ರಾಹುಲ್ ಅವರನ್ನು ಶಿವಾನಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮೊದಲು ಅವರ ಲಗೇಜ್ ತೆಗೆದುಕೊಂಡು, ತಿಲಕವಿಟ್ಟು ಆರತಿ ಬೆಳಗಿದ್ದಾರೆ. ಬಳಿಕ ಹೂವುಗಳನ್ನು ಸುರಿದು, ಬಾಗಿಲಿಗೆ ಕಟ್ಟಿದ್ದ ರಿಬ್ಬನ್ ಕತ್ತರಿಸುವಂತೆ ಹೇಳಿದ್ದಾರೆ. ನಂತರ ಮನೆಯೊಳಗೆ ಬಂದ ರಾಹುಲ್, ಪತ್ನಿ ಮತ್ತು ಮಗುವಿನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಕೇಕ್ ಮೇಲೆ ‘ಥ್ಯಾಂಕ್ ಯು ರಾಹುಲ್’ ಸಂದೇಶ

ರಾಹುಲ್ ಅವರ 15 ವರ್ಷಗಳ ದೇಶ ಸೇವೆಯನ್ನು ಗೌರವಿಸಲು ವಿಶೇಷವಾಗಿ ಕೇಕ್ ಸಿದ್ಧಪಡಿಸಲಾಗಿತ್ತು. ಅದರ ಮೇಲೆ ‘ಥ್ಯಾಂಕ್ ಯು ರಾಹುಲ್’ ಎಂದು ಬರೆಯಲಾಗಿತ್ತು. ಪತ್ನಿ ಮತ್ತು ಮಗುವಿನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಬಳಿಕ ಕುಟುಂಬದವರು ಫೋಟೋ ತೆಗೆಸಿಕೊಂಡಿದ್ದಾರೆ. ಈ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋವನ್ನು ಶಿವಾನಿ ಸೆಪ್ಟೆಂಬರ್ 1ರಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದು ಗಮನ ಸೆಳೆಯುತ್ತಿದೆ.

2011ರಲ್ಲಿ ನೌಕಾಪಡೆಗೆ ಸೇರ್ಪಡೆ, 2026ರಲ್ಲಿ ನಿವೃತ್ತಿ

ರಾಹುಲ್ ಮಧ್ವಾಲ್ ಅವರು 2011ರ ಸುಮಾರಿಗೆ ಭಾರತೀಯ ನೌಕಾಪಡೆಗೆ ಸೇರಿದ್ದು, 2026ರಲ್ಲಿ ನಿವೃತ್ತರಾಗಿದ್ದಾರೆ. ಅವರ ಪತ್ನಿ ಹಂಚಿಕೊಂಡಿರುವ ಪ್ರಶಸ್ತಿಗಳು ಮತ್ತು ಸೇವಾ ದಾಖಲೆಗಳ ಫೋಟೋಗಳಲ್ಲಿ ‘ಪಿಒ-ಎಲ್ಒಜಿ’ (PO-LOG)ಎಂಬ ಹುದ್ದೆಯನ್ನು ಉಲ್ಲೇಖಿಸಲಾಗಿದೆ.

‘ಪಿಒ-ಎಲ್ಒಜಿ’ ಎಂದರೆ ಪೆಟ್ಟಿ ಆಫೀಸರ್ ಲಾಜಿಸ್ಟಿಕ್ಸ್. ಈ ಹುದ್ದೆಯಲ್ಲಿ ಸರಕು ಪೂರೈಕೆ ಮತ್ತು ದಾಸ್ತಾನು ನಿರ್ವಹಣೆಯ ಜವಾಬ್ದಾರಿ ಇರುತ್ತದೆ. ಪತಿ ನಿವೃತ್ತಿಯಾದ ಖುಷಿಯಲ್ಲಿ ಶಿವಾನಿ, “15 ವರ್ಷಗಳ ಸಮರ್ಪಣೆ, ಶಿಸ್ತು ಮತ್ತು ತ್ಯಾಗದ ಬಳಿಕ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿವೃತ್ತಿಗೆ ಅಭಿನಂದನೆಗಳು. ಮನೆಗೆ ಸ್ವಾಗತ

ವಿಡಿಯೋಗೆ ಮೆಚ್ಚುಗೆ, ನಿವೃತ್ತಿಗೆ ಶುಭಾಶಯ

ರಾಹುಲ್ ಅವರ ನಿವೃತ್ತಿಯ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಅವರ ದೇಶ ಸೇವೆಯನ್ನು ಶ್ಲಾಘಿಸಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ. ಅದರಲ್ಲೂ ರಾಹುಲ್ ತಟ್ಟೆಯಲ್ಲಿದ್ದ ಸಿಹಿಯನ್ನು ಪತ್ನಿಗೆ ತಿನ್ನಿಸುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಈ ಮಧುರ ಕ್ಷಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 'ಮದ್ವೆಯಾಗಿದ್ಯಾ, ಬೇಗ ಮಗು ಮಾಡಿಕೊಳ್ಳಲ್ಲ ತಾನೇ? HR ಪ್ರಶ್ನೆಗೆ ಮಹಿಳೆ ದಂಗು; ಇಂಟರ್​ನೆಟ್​ನಲ್ಲಿ ಪರ-ವಿರೋಧ ಚರ್ಚೆ

15 ವರ್ಷಗಳ ಸೇವೆಯ ಬಳಿಕ ನಿವೃತ್ತಿ ಏಕೆ?

ರಾಹುಲ್ 15 ವರ್ಷಗಳ ಸೇವೆಯ ಬಳಿಕ ನಿವೃತ್ತಿಯಾಗಿದ್ದೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಅವರ ನಿವೃತ್ತಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನೌಕಾಪಡೆಯಲ್ಲಿ ನಿವೃತ್ತಿ ನಿಯಮಗಳು ಹುದ್ದೆ ಮತ್ತು ಸೇವಾ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತವೆ. ದೇಶ ಸೇವೆಯ ಬಳಿಕ ಮನೆಗೆ ಮರಳಿದ ರಾಹುಲ್‌ಗೆ ಕುಟುಂಬ ನೀಡಿದ ಈ ವಿಶೇಷ ಸ್ವಾಗತ, ಅವರ ತ್ಯಾಗಕ್ಕೆ ಗೌರವ ಸಲ್ಲಿಸುವ ಜತೆಗೆ ಕುಟುಂಬದ ಪ್ರೀತಿಯನ್ನೂ ತೋರಿಸಿದೆ.