ನ್ಯೂಸ್

ಮದ್ವೆಯಾದ ಎರಡೇ ತಿಂಗಳಿಗೆ ನವವಿವಾಹಿತೆಯ ಬಾಳಿಗೆ ಕೊಳ್ಳಿಯಿಟ್ಟ ರೀಲ್ಸ್​ ವಿಡಿಯೋ!

ಹೈದರಾಬಾದ್​: ಜಾಸ್ತಿ ರೀಲ್ಸ್​ ವಿಡಿಯೋ ನೋಡಬೇಡ ಎಂದು ಗಂಡ ಬೈದಿದ್ದಕ್ಕೆ ಮನನೊಂದು ನವವಿವಾಹಿತೆಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳನ್ನು ಶೈಲು (20) ಎಂದು ಗುರುತಿಸಲಾಗಿದೆ. ಈ ಘಟನೆ ಹೈದರಾಬಾದ್​ನ ಜೇಡಿಮೆಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯವಾಡ ಮೂಲದ ಶೈಲು ಕಳೆದ ಅ. 16 ರಂದು ಕಡಪ ಜಿಲ್ಲೆಯ ಗಂಗಾಪ್ರಸಾದ್​​ ರೆಡ್ಡಿ ಎಂಬುವನೊಂದಿಗೆ ಮದುವೆ ಆಗಿದ್ದಳು.

ಗಂಗಾಪ್ರಸಾದ್​ ರೆಡ್ಡಿ ಹೈದರಾಬಾದ್​ನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿ, ಚಿಂತಲ್​ನ ಶ್ರೀಸಾಯಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮದುವೆಗೂ ಮುಂಚೆಯೇ ಶೈಲುಗೆ ಶಾರ್ಟ್ಸ್​ ಅಥವಾ ರೀಲ್ಸ್​ ವಿಡಿಯೋಗಳನ್ನು ನೋಡುವ ಗೀಳಿತ್ತು. ಅತಿ ಹೆಚ್ಚು ಸಮಯ ವಿಡಿಯೋ ನೋಡುವುದರಲ್ಲೇ ಕಳೆಯುತ್ತಿದ್ದಳು.

ಮದುವೆ ನಂತರವೂ ವಿಡಿಯೋ ನೋಡುವುದನ್ನು ಶೈಲು ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಗಂಡ-ಹೆಂಡತಿಯ ನಡುವೆ ಬುಧವಾರ ರಾತ್ರಿ ಜಗಳ ನಡೆದಿತ್ತು. ಬೈದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶೈಲು ಹೆದರಿಸಿದ್ದಳು. ಇದರಿಂದ ಬೆದರಿದ ಗಂಗಾಪ್ರಸಾದ್​, ಶೈಲು ತಾಯಿಗೆ ಈ ವಿಚಾರವನ್ನು ತಿಳಿಸಿ, ಹೈದರಾಬಾದ್​ಗೆ ಬರುವಂತೆ ಬಸ್​ ಟಿಕೆಟ್​ ಬುಕ್​ ಮಾಡಿದ್ದರು. ಆದರೆ, ಶೈಲು ತಾಯಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮಗಳಿಗೆ ಮೊಬೈಲ್​ನಲ್ಲಿ ಬುದ್ಧಿಮಾತು ಹೇಳಿದ್ದಳು.

ಬುಧವಾರ ರಾತ್ರಿ ಗಂಡ ಮಲಗಿದ ಬಳಿಕ ಗುರುವಾರ ಮುಂಜಾನೆಯೇ ಎದ್ದು ಕಟ್ಟಡದ ಎರಡನೇ ಮಹಡಿಯಿಂದ ಹಾರಿ ಶೈಲು ಪ್ರಾಣ ಬಿಟ್ಟಿದ್ದಾಳೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಜೇಡಿಮೆಟ್ಲ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)