ಅಹಮದಾಬಾದ್: ತಾನು ಮಾಡಿದ ಆಲೂಗಡ್ಡೆ ಪಲ್ಯವನ್ನು ತಿನ್ನಲು ನಿರಾಕರಿಸಿದ ಎಂಬ ಕಾರಣಕ್ಕಾಗಿ ಪತ್ನಿಯೊಬ್ಬಳು ಪತಿಯನ್ನು ಬಟ್ಟೆ ಒಗೆಯುವ ಕೋಲಿನಿಂದ ಮನಸೋಇಚ್ಛೆ ಬಡದಿದ್ದಾಳೆ. ಈ ದಾಳಿಯಲ್ಲಿ ಪತಿಯ ಬಲ ಹೆಗಲು ಫ್ರಾಕ್ಚರ್ ಆಗಿದೆ.
ಅಹಮದಾಬಾದ್ನ ವಾಸ್ನಾದ ಸೋರೈನಗರ್ ನಿವಾಸಿ ಹರ್ಷದ್ ಗೋಯೆಲ್ (40) ಹಲ್ಲೆಗೆ ಒಳಗಾದ ಪತಿ. ತಾರಾ ಗೋಯೆಲ್ ಹಲ್ಲೆ ಮಾಡಿದಾಕೆ. ಇದೀಗ ತಾರಾ ವಿರುದ್ಧ ಹರ್ಷದ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹರ್ಷದ್ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಲೂಗಡ್ಡೆಯನ್ನು ಸೇವಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಶುಕ್ರವಾರದ ರಾತ್ರಿಯ ಭೋಜನಕ್ಕೆ ತಾರಾ ಆಲೂಗಡ್ಡೆ ಪಲ್ಯವನ್ನು ತಯಾರಿಸಿದ್ದಳು. ಊಟಕ್ಕೆ ಏನೆಂದು ಹರ್ಷದ್ ಕೇಳಿದಾಗ ಆಕೆ ಆಲೂಗಡ್ಡೆ ಪಲ್ಯ ಮತ್ತು ಚಪಾತಿ ಮಾಡಿರುವುದಾಗಿ ಹೇಳಿದ್ದಳು.
ವೈದ್ಯರ ಸಲಹೆಯನ್ನು ಉದ್ಗರಿಸುತ್ತಾ, ಆಲೂಗಡ್ಡೆ ಪಲ್ಯ ತಿನ್ನುವುದಿಲ್ಲ. ಬೇರೆ ಯಾವುದಾದರೂ ಪಲ್ಯ ಮಾಡುವಂತೆ ಪತ್ನಿಗೆ ಹೇಳಿದ್ದರು. ಆದರೆ ಇದರಿಂದ ಸಿಟ್ಟಿಗೆದ್ದ ಆಕೆ, ಅವರೊಂದಿಗೆ ಜಗಳ ತೆಗೆದಿದ್ದಳು. ತೀರಾ ಸಿಟ್ಟಿಗೆದ್ದ ಆಕೆ ಬಚ್ಚಲು ಮನೆಗೆ ಹೋಗಿ, ಅಲ್ಲಿಟ್ಟಿದ್ದ ಬಟ್ಟೆ ಹೊಗೆಯುವ ಕೋಲನ್ನು ತಂದು ಹರ್ಷದ್ ಮೇಲೆ ಹಠಾತ್ತನೆ ಹಲ್ಲೆ ಮಾಡಿದ್ದಳು.
ಹರ್ಷದ್ನ ಕೂಗಾಟ ಕೇಳಿ ಕುಟುಂಬದ ಸದಸ್ಯರು ಆತನ ನೆರವಿಗೆ ಧಾವಿಸಿದ್ದರು. ಪತಿ-ಪತ್ನಿಯರನ್ನು ದೂರ ಮಾಡಿ, ತೀವ್ರ ಅಸ್ವಸ್ಥಗೊಂಡಿದ್ದ ಹರ್ಷದ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಎಕ್ಸ್ರೇ ಮಾಡಿದಾಗ ಹರ್ಷದ್ ಅವರ ಬಲ ಹೆಗಲಿಗೆ ಗಂಭೀರ ಗಾಯವಾಗಿದ್ದು, ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ವಾಸ್ನಾ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ. ತಾರಾ ವಿರುದ್ಧ ಪತಿಯ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಮಾಡಿದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸೂಕ್ತ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.