ನ್ಯೂಸ್

ಭರ್ಜರಿ ಪಾರ್ಟಿ ಮಾಡಿ, ಬಿರಿಯಾನಿ ತಿಂದಾದ ಬಳಿಕ ಪತ್ನಿಯನ್ನೇ ಕೊಂದ ಪತಿ; ಮಗುವೀಗ ಅನಾಥ

ಬೆಂಗಳೂರು: ಪತಿ-ಪತ್ನಿಯ ಕೋಳಿ ಜಗಳ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ಬೆಂಗಳೂರಿನ ಹೊಂಗಸಂದ್ರದ ಶ್ರೀನಿವಾಸ ಲೇಔಟ್​​ನಲ್ಲಿ ನಡೆದಿದೆ.

'ಸಾಯಿಸ್ತೀಯಾ? ಸಾಯಿಸು ನೋಡೋಣ' ಎಂದು ಪತ್ನಿ ಹೇಳಿದ್ದಕ್ಕೆ ಪತಿ ಆಕೆಯ ಕತ್ತು ಸೀಳಿ ಕೊಂದಿದ್ದಾನೆ. ವೆಂಕಟಲಕ್ಷ್ಮೀ (26) ಮೃತ ಮಹಿಳೆ. ಆಕೆಯ ಗಂಡ ಸುರೇಶ್(30)ಬಂಧಿತ ಆರೋಪಿ. ಇದನ್ನೂ ಓದಿ: ಅಲ್ಕೋಹಾಲ್​ ಮಿಶ್ರಿತ ಸ್ಯಾನಿಟೈಸರ್​ ಬಳಕೆಯಿಂದ ಧಾರ್ಮಿಕ ತಾಣಗಳು ಅಪವಿತ್ರ….!

ಭಾನುವಾರವಷ್ಟೇ ಇಬ್ಬರೂ ಭರ್ಜರಿ ಪಾರ್ಟಿಮಾಡಿ, ಬಿರಿಯಾನಿ ತಿಂದಿದ್ದರು. ಪಾರ್ಟಿ ಬಳಿಕ ಪತ್ನಿ ವೆಂಕಟಲಕ್ಷ್ಮೀ ಪತಿಯ ಮೇಲೆ ಏನೋ ಅನುಮಾನಗೊಂಡು ಜಗಳ ತೆಗೆದಿದ್ದಳು. ಮೊದಲು ಶುರುವಾದ ಕೋಳಿ ಜಗಳ, ಬರಬರುತ್ತ ಹೆಚ್ಚಾಯಿತು. ಮಾತಿನ ಭರದಲ್ಲಿ ವೆಂಕಟಲಕ್ಷ್ಮೀ, ಏನು ಸಾಯಿಸ್ತೀಯಾ, ಸಾಯ್ಸು ನೋಡೋಣ ಎಂದು ಹೇಳಿದಳು.

ಅಷ್ಟಕ್ಕೇ ಸುರೇಶ್​ ವಿಪರೀತ ಕೋಪಗೊಂಡು, ತರಕಾರಿ ಕತ್ತರಿಸುವ ಚಾಕುವಿನಿಂದ ಪತ್ನಿ ಕತ್ತು ಸೀಳಿ ಹತ್ಯೆಗೈದಿದ್ದಾನೆ. ಪೊಲೀಸರು ಬಂಧಿಸಿದಾಗಲೂ ಮೊದಲು ಒಪ್ಪಿಕೊಳ್ಳದೆ ಹೈಡ್ರಾಮಾ ಆಡಿದ್ದಾನೆ. ಅವಳೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಬಳಿಕ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪದಗ್ರಹಣಕ್ಕೆ ಅಂತೂ ಸಿಕ್ತು ಅನುಮತಿ: ಟ್ವಿಟರ್​ನಲ್ಲಿ ಖುಷಿ ಹಂಚಿಕೊಂಡ ಡಿಕೆಶಿ

ಈಗ ಅಮ್ಮ ಸಾವನ್ನಪ್ಪಿದ್ದಾಳೆ. ಅಪ್ಪ ಜೈಲಿಗೆ ಹೋಗಿದ್ದಾನೆ. ಮಗು ಅನಾಥವಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.