Woman Murder: ಬೆಂಗಳೂರಿನಲ್ಲಿ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಖಾಲಿ ಸೈಟ್ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರಿಗೆ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣ ಭೇದಿಸಿದ ಸಂಪಿಗೆಹಳ್ಳಿ ಪೊಲೀಸರು ಮೃತಳ ಪತಿಯನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ಸಾಗರ್ ತನ್ನ ಪತ್ನಿ ಅನುಸೂಯಾ ಬೇಹೆರಾ (28) ಅವರನ್ನು ಕೊಲೆ ಮಾಡಿ, ಶವವನ್ನು ಖಾಲಿ ಜಾಗದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರ್ ಹಾಗೂ ಅನುಸೂಯಾ ಪ್ರೀತಿಸಿ ಮದುವೆಯಾಗಿದ್ದು, ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆಗಸ್ಟ್ 11ರಂದು ಜಗಳ ವಿಕೋಪಕ್ಕೆ ಹೋಗಿ, ಸಾಗರ್ ಪತ್ನಿಯನ್ನು ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಸಾಗರ್ ಮೂರು ದಿನ ಪತ್ನಿಯ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ನಂತರ ಶವವನ್ನು ಬಟ್ಟೆಯಲ್ಲಿ ಸುತ್ತಿ, ಹಾಸಿಗೆಯೊಳಗೆ ಹಾಕಿ ಸಂಪಿಗೆಹಳ್ಳಿ ಖಾಲಿ ಸೈಟ್‌ನಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶವ ಪತ್ತೆಯಾಗಿದೆಯೇ ಎಂದು ತಿಳಿದುಕೊಳ್ಳಲು ಆರೋಪಿ ಹಲವು ದಿನಗಳ ಕಾಲ ಆ ಜಾಗಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ..
ಕೊಲೆಯಾದ ಸುಮಾರು 20 ದಿನಗಳ ಬಳಿಕ, ಸೆಪ್ಟೆಂಬರ್ 2ರಂದು ಖಾಲಿ ಸೈಟ್ ಸ್ವಚ್ಛಗೊಳಿಸುವ ವೇಳೆ ಮಹಿಳೆಯ ಶವ ಪತ್ತೆಯಾಗಿದೆ. ಅಷ್ಟರಲ್ಲಾಗಲೇ ಶವ ಕೊಳೆತ ಸ್ಥಿತಿಯಲ್ಲಿದ್ದು, ಬೀದಿ ನಾಯಿಗಳು ದೇಹದ ಕೆಲವು ಭಾಗಗಳನ್ನು ತಿಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಶವದ ಸ್ಥಿತಿ ಹದಗೆಟ್ಟಿದ್ದರಿಂದ ಮೃತಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಈ ವೇಳೆ ಶವದ ಮೇಲಿದ್ದ ಬಟ್ಟೆಯ ಟ್ಯಾಗ್ ಪ್ರಮುಖ ಸುಳಿವು ನೀಡಿದೆ.ಟ್ಯಾಗ್‌ನ ಆಧಾರದಲ್ಲಿ ಬಟ್ಟೆ ಖರೀದಿಸಿದ ಮಾಲ್‌ವರೆಗೆ ತನಿಖೆ ನಡೆಸಿದ ಪೊಲೀಸರು, ಅಲ್ಲಿಂದ ಸಿಕ್ಕ ಮಾಹಿತಿಯ ಮೂಲಕ ಮೃತಳನ್ನು ಅನುಸೂಯಾ ಎಂದು ಗುರುತಿಸಿದ್ದಾರೆ.
ತನಿಖೆ ವೇಳೆ ಅನುಸೂಯಾ ಕಾಣೆಯಾಗಿದ್ದರೂ ಆಕೆಯ ಪತಿ ಸಾಗರ್ ಎಂದಿನಂತೆ ಹೋಟೆಲ್‌ಗೆ ಕೆಲಸಕ್ಕೆ ಹೋಗುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂಬ ಮಾಹಿತಿ ಕೂಡ ಹೋಟೆಲ್‌ನಿಂದ ಪೊಲೀಸರಿಗೆ ಸಿಕ್ಕಿದೆ.
ಇದನ್ನೂ ಓದಿ:
ಬಳಿಕ ಸಾಗರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಶವ ಪತ್ತೆಯಾದ ಒಂದು ವಾರದೊಳಗೆ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಿಬಿಎಂಪಿ ಸೂಚನೆಯಂತೆ ಖಾಲಿ ಸೈಟ್ ಸ್ವಚ್ಛಗೊಳಿಸಲು ಕಾರ್ಮಿಕರು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್)