ನ್ಯೂಸ್

ಅತ್ತೆ, ಮಾವನ ಮೇಲಿನ ಸಿಟ್ಟಿಗೆ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ| Suicide

ಧಮ್ತಾರಿ: ಛತ್ತೀಸ್​ಗಢದ ಧಮ್ತಾರಿ ಜಿಲ್ಲೆಯಲ್ಲಿ 22 ವರ್ಷದ ವ್ಯಕ್ತಿಯೊಬ್ಬ ಅತ್ತೆ-ಮಾವನ ಮೇಲಿನ ಸಿಟ್ಟಿನಿಂದ ಕುತ್ತಿಗೆ ಹಿಸುಕಿ ಪತ್ನಿಯನ್ನು ಕೊಂದು, ಇನ್​ಸ್ಟಾಗ್ರಾಂನಲ್ಲಿ ತಪ್ಪೊಪ್ಪಿಕೊಂಡು ಬಳಿಕ  ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂದು ಬುಧವಾರ(ಅ. 22) ವರದಿಯಾಗಿದೆ.

ಕರೇಲಿಬಾಡಿ ಪೊಲೀಸ್ ಚೌಕಿಯ ವ್ಯಾಪ್ತಿಯ ಹಾರ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ. ದಂಪತಿಯನ್ನು ಹಿತೇಶ್ ಯಾದವ್ @ ಹಿಮ್ಮತ್ ಮತ್ತು ಅವರ 20 ವರ್ಷದ ಪತ್ನಿ ಲಕ್ಷ್ಮಿ ಯಾದವ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ದಂಪತಿಗಳು ತಮ್ಮ ಕೋಣೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ ಪದೇ ಪದೇ ಡೋರ್ ಬಡಿದರೂ ಪ್ರತಿಕ್ರಿಯಿಸದಿದ್ದಾಗ ಕಿಡಿಕಿ ಮೂಲಕ ಮೃತ ಹಿತೇಶ್ ಅಣ್ಣ ನೋಡಿದಾಗ ಸಾವನ್ನಪ್ಪಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪ್ರಾಥಮಿಕ ಮರಣೋತ್ತರ ವರದಿಯ ಪ್ರಕಾರ ಪತ್ನಿ ಲಕ್ಷ್ಮಿಯನ್ನು ಸ್ಕಾರ್ಫ್‌ನಿಂದ ಕುತ್ತಿಗೆ ಹಿಸುಕಿ ಕೊಲ್ಲಲಾಗಿದೆ. ಹಿತೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಇನ್​ಸ್ಟಾಗ್ರಾಂನಲ್ಲಿ ಮೃತ ಹಿತೇಶ್ ಪೋಸ್ಟ್​ ಹಾಕಿದ್ದು, ನಾನು ಹಿಮ್ಮತ್ ಯಾದವ್, ನನ್ನ ಪತ್ನಿ ಲಕ್ಷ್ಮಿ ಯಾದವ್ ಅವರನ್ನು ಕೊಂದಿದ್ದೇನೆ. ಯಾವುದೇ ಕಾರಣವಿಲ್ಲ, ಆದರೆ ಆಕೆಯ ಪೋಷಕರ ಕಾರಣದಿಂದಾಗಿ ನಾನು ಹಾಗೆ ಮಾಡಿದ್ದೇನೆ. ಈಗ ನೇಣು ಬಿಗಿದುಕೊಂಡು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಬರೆದಿದ್ದಾನೆ ಎನ್ನಲಾಗಿದೆ. ಆದರೆ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. (ಏಜೆನ್ಸೀಸ್)