ಬೆಂಗಳೂರು: ಮಹಿಳೆಯೊಬ್ಬರು ಗರ್ಭವತಿಯಾಗಿದ್ದೇ ಆಕೆಯ ಪ್ರಾಣಕ್ಕೆ ಮುಳುವಾಗಿ ಪರಿಣಮಿಸಿದೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರಣ ಬಹಿರಂಗವಾಗಿದೆ. ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ಅನುಮಾನಗೊಂಡ ಗಂಡ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ತಾವರೆಕೆರೆಯ ಸುಭಾಷ್ನಗರದ ಫ್ಲ್ಯಾಟ್ನಲ್ಲಿ ಈ ಕೊಲೆ ನಡೆದಿದೆ. ನಾಜ್ (22) ಕೊಲೆಗೀಡಾದ ಯುವತಿ. ಪತಿ ನಾಸಿರ್ ಹುಸೇನ್ ಕೊಲೆ ಆರೋಪಿ. ಕಳೆದ 6 ತಿಂಗಳ ಹಿಂದೆ ಫ್ಲ್ಯಾಟ್ನಲ್ಲಿ ಈ ದಂಪತಿ ವಾಸವಿದ್ದರು. ಈ ಕೊಲೆಗೆ ಕಾರಣ ಏನು ಎಂಬುದು ಇದೀಗ ಬಹಿರಂಗಗೊಂಡಿದೆ.
ಪ್ರೀತಿಸಿದ್ದ ಇವರಿಬ್ಬರು ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ನಾಸಿರ್ ಹುಸೇನ್ಗೆ ತಂದೆ-ತಾಯಿ ಇರಲಿಲ್ಲ, ನಾಜ್ ಈ ಮದುವೆಗೆ ತಂದೆ-ತಾಯಿಯನ್ನು ಒಪ್ಪಿಸಿ ಅನುಮತಿ ಪಡೆದುಕೊಂಡಿದ್ದಳು. ತಬ್ಬಲಿಯಂತಿದ್ದ ನಾಸಿರ್ ಗುಣವಂತ ಎಂದುಕೊಂಡು ನಾಜ್ಳನ್ನು ಆಕೆಯ ಪಾಲಕರು ಮದುವೆ ಮಾಡಿಸಿಕೊಟ್ಟಿದ್ದರು.
ಆದರೆ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಜ್ ಮೇಲೆ ನಾಸಿರ್ ಅನುಮಾನ ವ್ಯಕ್ತಪಡಿಸಿದ್ದ. ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎನ್ನುತ್ತಿದ್ದ ನಾಸಿರ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದ. ಇದು ನಾಜ್ಗೆ ಇಷ್ಟವಿರದ್ದರಿಂದ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ವಿಕೋಪಕ್ಕೆ ಹೋಗಿದ್ದು, ನಾಸಿರ್ ನಾಜ್ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸದ್ದುಗುಂಟೆ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.