ನ್ಯೂಸ್

2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

ಬೆಂಗಳೂರು: ಈ ಪತಿ-ಪತ್ನಿ ಇಬ್ಬರೂ ಎರಡು ವರ್ಷಗಳಿಂದ ಬೇರೆ ಇದ್ದರು, ಎರಡು ದಿನಗಳ ಹಿಂದೆ ಮರಳಿ ಬಂದ ಪತಿ, ಆಮೇಲೆ ಮಾಡಿದ್ದು ಮಾತ್ರ ತೀರಾ ಕ್ರೂರ ಕೃತ್ಯ. ಇದೀಗ ಏಳು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಇವರಿಬ್ಬರೂ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ.

ಇಂಥದ್ದೊಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಹೆದ್ದಾರಿ ಬದಿಯಲ್ಲೇ ನಡೆದಿದೆ. ಆಂಧ್ರಪ್ರದೇಶ ಮೂಲದ ಪತಿ ರಮೇಶ್ ಎಂಬಾತ ಪತ್ನಿ ಅರ್ಶಿತಾ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಏಳು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾದ ಇಬ್ಬರು, ದಾಂಪತ್ಯ ಕಲಹದಿಂದ ಬಳಿಕ ಬೇರೆಯಾಗಿದ್ದರು. ಹೀಗೆ ಎರಡು ವರ್ಷಗಳಿಂದ ಬೇರೆ ಇದ್ದ ಪತಿ, ಎರಡು ದಿನಗಳ ಹಿಂದೆ ಹೆಂಡತಿ ಮಕ್ಕಳನ್ನು ನೋಡಿಕೊಂಡು ಹೋಗಲೆಂದು ಬಂದಿದ್ದ. ಇಂದು ಸಂಜೆ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಹೆಂಡತಿ ಮಕ್ಕಳನ್ನು ಕರೆತಂದಿದ್ದ ಈತ ಬಳಿಕ ಜಗಳವಾಡಿದ್ದ.

ಪತ್ನಿ ಮೇಲಿನ ಅನುಮಾನದಿಂದ ಈತ ಅಮಾನುಷವಾಗಿ ವರ್ತಿಸಿದ್ದು, ಆಕೆಗೆ ಮೇಲಿಂದ ಮೇಲೆ ಚಾಕುವಿನಿಂದ ಚುಚ್ಚಿ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಹಲ್ಲೆಯ ದೃಶ್ಯ ಸ್ಥಳೀಯ ಮೊಬೈಲ್​ಫೋನ್​ಗಳಲ್ಲಿ ಚಿತ್ರೀಕರಣಗೊಂಡಿದೆ. ಬಳಿಕ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.