ನ್ಯೂಸ್

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ತಲೆ ತೆಗೆದ ಪತಿ

ಭೋಪಾಲ್​: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯ ಶಿರಚ್ಚೇದ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯಾರ್​ನ ಖೈರಿ ಮೊಹಲ್ಲಾದಲ್ಲಿ ನಡೆದಿದೆ.

ರೇಖಾ ಚೌಧರಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಆರೋಪಿ ಕಮಲೇಶ್​ ಚೌಧರಿ ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣದ ಹಿನ್ನಲೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಆರೋಪಿ ಕಮಲೇಶ್​ ಹಾಗೂ ರೇಖಾ ನಡುವೆ ಪ್ರತಿನಿತ್ಯ ಒಂದಿಲ್ಲೊಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ತನ್ನ ಪತಿ ಬೇರೆ ಮಹಿಳೆ ಜೊತೆ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ರೇಖಾ ಪದೇ ಪದೇ ಪ್ರಶ್ನಿಸುತ್ತಿದ್ದ ಕಾರಣ ದಂಪತಿಗಳಿಬ್ಬರ ನಡುವೆ ಗಲಾಟೆಯಾಗುತ್ತಿತ್ತು.

ತನ್ನ ಹೆಂಡತಿ ತನ್ನ ಮೇಲೆ ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಿದ್ದರಿಂದ ತೀವ್ರವಾಗಿ ಕುಪಿತಗೊಂಡಿದ್ದ ಕಮಲೇಶ್​ ಆಕೆ ಮಲಗಿರುವ ವೇಳೆ ಮಕ್ಕಳ ಕಣ್ಣೆದುರಲ್ಲೇ ಶಿರಚ್ಚೇದ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಈ ವಿಚಾರವನ್ನು ಮಕ್ಕಳು ನೆರೆಹೊರೆಯವರಿಗೆ ತಿಳಿಸಿ ಅವರ ಸಹಾಯದೊಂದಿಗೆ ದೂರು ದಾಖಲಿಸಿದ್ದಾರೆ.

ಆರೋಪಿ ಕಮಲೇಶ್​ ತಲೆಮಾರಿಸಿಕೊಂಡಿದ್ದು, ಆತನ ಬಂಧನಕ್ಕೆ ತಂಡ ಒಂದನ್ನು ರಚಿಸಲಾಗಿದೆ. ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.