ಹುಣಸೂರು: ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಪಿಯು ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿದ್ದು, ನಬಾರ್ಡ್‌ನ 2018-19ನೇ ಸಾಲಿನಡಿ ಒಂದು ಪ್ರಯೋಗಾಲಯ ಕೊಠಡಿ ಸೇರಿ ಒಟ್ಟು 6 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಒಂದೆರಡು ತಿಂಗಳಲ್ಲಿ ಕೊಠಡಿಗಳು ಸಿದ್ಧಗೊಳ್ಳಲಿವೆ. ನಾನು ಓದಿದ ಈ ಕಾಲೇಜಿಗೆ ನನ್ನ ಅಧಿಕಾರಾವಧಿಯ ಈ 12 ವರ್ಷಗಳಲ್ಲಿ ಒಟ್ಟು 6 ನೂತನ ಸಮುಚ್ಚಯವನ್ನು ಒದಗಿಸಿರುವ ಸಮಾಧಾನ ನನ್ನದಾಗಿದೆ ಎಂದು ಹೇಳಿದರು.
ಕಾಲೇಜಿನ ಹಳೆಯ ಕಟ್ಟಡ ದುರಸ್ತಿಗಾಗಿ 30 ಲಕ್ಷ ರೂ. ಅವಶ್ಯಕತೆಯಿದ್ದು, ಇದಕ್ಕಾಗಿ ಆರ್ಥಿಕ ಕ್ರೋಢಿಕರಣಕ್ಕೆ ಕ್ರಮವಹಿಸಲಾಗುವುದು. ಶಾಸಕರ ನಿಧಿಯಡಿ ಕಾಲೇಜು ಆವರಣದಲ್ಲಿ ಚರಂಡಿ ಕಾಮಗಾರಿಯನ್ನು 5 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ್ರಾಂಶುಪಾಲ ನಾಗರಾಜೇ ಅರಸ್, ಸಿಡಿಸಿ ಉಪಾಧ್ಯಕ್ಷ ಮೋಹನ್, ಮುಖಂಡ ಪುಟ್ಟರಾಜು, ಸಹ ಪ್ರಾಧ್ಯಾಪಕರು ಮತ್ತು ಕಾಲೇಜು ಸಿಬ್ಬಂದಿ ಹಾಜರಿದ್ದರು.