ಹುಣಸೂರು: ತಾಲೂಕಿಗೆ ವಿವಿಧ ರಾಜ್ಯಗಳಿಂದ ಗುರುವಾರದವರೆಗೆ ಒಟ್ಟು 29ಜನರು ಆಗಮಿಸಿದ್ದು, ಎಲ್ಲರನ್ನೂ ಸರ್ಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಐ.ಇ.ಬಸವರಾಜು ತಿಳಿಸಿದ್ದಾರೆ.
ಲಾಕ್‌ಡೌನ್ ಜಾರಿಯಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವವರಿಗೆ ಆಯಾ ರಾಜ್ಯಗಳಿಗೆ ತೆರಳಲು ಕೇಂದ್ರ ಸರ್ಕಾರ ನೀಡಿದ ಅನುಮತಿಯನ್ವಯ ಈವರೆಗೆ ತಾಲೂಕಿಗೆ ರಾಜಾಸ್ಥಾನದಿಂದ 4, ಗುಜರಾತ್ 1, ಮುಂಬೈನಿಂದ 2, ಉತ್ತರ ಪ್ರದೇಶದಿಂದ 3, ಕೇರಳದಿಂದ 2 ಹಾಗೂ ತಮಿಳುನಾಡಿನಿಂದ 17 ಮಂದಿ ಆಗಮಿಸಿದ್ದು, ಎಲ್ಲರನ್ನೂ ತಾಲೂಕಿನ ಧರ್ಮಾಪುರ ಕಿತ್ತೂರು ರಾಣಿ ಚನ್ನಮ ವಸತಿ ಶಾಲೆ ಹಾಗೂ ಮುರಾರ್ಜಿ ವಸತಿ ಶಾಲೆಗಳಲ್ಲಿ ಹಾಗೂ ಹಳೆಬೀಡಿನ ಮುರಾರ್ಜಿ ವಸತಿಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.ಮೂರು ವಸತಿ ನಿಲಯಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ. ಕ್ವಾರಂಟೈನ್ ನಲ್ಲಿ ಇರುವವರಿಗೆ ಊಟೋಪಚಾರಗಳ ವ್ಯವಸ್ಥೆ ಮಾಡಲಾಗಿದೆ. ಸೇವಾ ಸಿಂಧು ಪಾಸ್‌ನಡಿ ತಾಲೂಕಿಗೆ ಆಗಮಿಸುವವರು ಕೂಡಲೇ ತಾಲೂಕು ಆಡಳಿತವನ್ನು ಸಂಪರ್ಕಿಸಿ ಕ್ವಾರಂಟೈನ್‌ಗೆ ಒಳಪಡುವುದು ಅವಶ್ಯ. ಕ್ವಾರಂಟೈನ್‌ನಲ್ಲಿ ಇರುವವರ ಮೊಬೈಲ್ ಸಂಖ್ಯೆಯನ್ನು ಪಡೆದು ಅವರಿಗೆ ಮೊಬೈಲ್ ಮೂಲಕವೇ ಅಗತ್ಯತೆಗಳನ್ನು ತಿಳಿದು ಒದಗಿಸಲಾಗುತ್ತಿದೆ. 14 ದಿನಗಳಕಾಲ ಕ್ವಾರಂಟೈನ್ ಮುಗಿದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೆಜ್ಜೆ ಇಡಲಾಗುವುದೆಂದು ತಿಳಿಸಿದರು.