ನ್ಯೂಸ್

'ಪಟ್ಟಭದ್ರರಿಂದ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ'

ಮೈಸೂರು: ಪಟ್ಟಭದ್ರ ಹಿತಾಶಕ್ತಿಗಳು ಕಾಂಗ್ರೆಸ್ ಸರ್ಕಾರ, ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮತ್ತು ಜೆಡಿಎಸ್ ನಾಗರಿಕರ ಸಮಸ್ಯೆಗಳನ್ನು ಮರೆತು, ಕಾಂಗ್ರೆಸ್ ವಿರುದ್ಧ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿವೆ. ಜನಪ್ರತಿನಿಧಿಗಳು ಪ್ರಜೆಗಳ ಸಮಗ್ರ ಅಭಿವೃದ್ಧಿ, ಅವರ ಜೀವನ ಕ್ರಮ ಹಾಗೂ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು. ಆದರೆ, ಇತ್ತೀಚೆಗೆ ರಾಜಕೀಯ ಪಕ್ಷಗಳು ತಾರತಮ್ಯ, ಅಸಮಾನತೆ ಹೋಗಲಾಡಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಸಂಘಟನೆಗಳು ಚುನಾವಣೆಯನ್ನು ಕೇಂದ್ರವಾಗಿರಿಸಿ ಹಿಂದುತ್ವ, ಅಖಂಡ ಭಾರತ ಮುಂತಾದ ಭಾವನಾತ್ಮಕ ವಿಷಯ ಪ್ರಚಾರ ಮಾಡುತ್ತಾ ಮನುಧರ್ಮ ಶಾಸ್ತ್ರವನ್ನು ಮರುಸ್ಥಾಪಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ನಡೆಯುತ್ತಿರುವುದು ಖಂಡನೀಯ. ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಿಜೆಪಿ ಮತ್ತು ಜೆಡಿಎಸ್ ಕಾನೂನು ಬದ್ಧವಾಗಿ ನಿಯಂತ್ರಿಸಲು ರಾಷ್ಟ್ರಪತಿ ಮಾರ್ಗಸೂಚಿ ರಚಿಸಬೇಕು. ಅಂಬೇಡ್ಕರ್ ಸಿದ್ಧಾಂತ ಅಪ್ರಸ್ತುತಗೊಳಿಸಲು ಹೊರಟಿರುವ ಕೋಮುವಾದಿಗಳ ಹುನ್ನಾರ ತಡೆಯಬೇಕು ಎಂದು ಒತ್ತಾಯಿಸಿದರು.

ಸಮಿತಿ ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜ, ಮುಖಂಡ ಎಚ್.ಎನ್.ಅಣ್ಣಯ್ಯ, ಕಾರ್ಯ ಬಸವಣ್ಣ, ಸುನೀತಾ, ಪ್ರಕಾಶ್, ಕೆ.ಗೋವಿಂದು ಹುನ್ನಗಳ್ಳಿ ಇತರರು ಇದ್ದರು.