ನ್ಯೂಸ್

ವಿನಮ್ರತ್ವರಸಾಯನ

ಸುದೀಪ್​ ವಿ.ಎನ್​

ವಿನಯಕ್ಕೆ ವಿನಮ್ರತೆ ಎಂದು ಕರೆಯುವರು. ಗುರು ಹಿರಿಯರಲ್ಲಿ ತಗ್ಗಿ ಬಗ್ಗಿ ನಡೆಯುವುದೇ ವಿನಮ್ರತೆ. ವಿದ್ಯೆ, ಧನ, ಅಧಿಕಾರಾದಿಗಳು ಬಂದಾಗ ವಿನಮ್ರ ವಾಗಿರಬೇಕೆಂಬುದು ಶ್ರೇಷ್ಠವಾದ ಸಂಸ್ಕೃತಿ. ಈ ವಿನಮ್ರತೆ ಒಂದು ಸವೋತ್ಕೃಷ್ಟವಾದ ಅಲಂಕಾರ. ಅಂತೆಯೇ ‘ವಿದ್ಯಾ ವಿನಯೇನ ಶೋಭತೆ’ ಎಂಬುದಾಗಿ ಹೇಳಿದ್ದಾರೆ. ಫಲ- ಪುಷ್ಪಾದಿಗಳಿಂದ ಭರಿತವಾದ ವೃಕ್ಷ ಲತಾದಿ ಗಳು ವಿನಮ್ರವಾಗುವುದರ ಮೂಲಕ ಪ್ರಕೃತಿಯೇ ಮನುಷ್ಯನಿಗೆ ವಿನಮ್ರತೆಯ ಪಾಠವನ್ನು ಕಲಿಸಿಕೊಡುತ್ತದೆ. ಯಾರು ಶಾಂತ ಸ್ವಭಾವದವರೋ, ಮನಸ್ಸಿನ

ಮೇಲೆ ನಿಗ್ರಹ ಉಳ್ಳವರೋ, ಪರಿಪೂರ್ಣರೋ ಅವರು ಮಾತ್ರ ವಿನಮ್ರವಾಗಿ ರಲು ಸಾಧ್ಯವಾಗುವುದು. ಒಂದು ತುಂಬಿದ ಕೊಡದ ಮಗ್ಗುಲಲ್ಲಿ ಖಾಲಿತಂಬಿಗೆ ಇದ್ದಾಗ ಆ ತಂಬಿಗೆಯನ್ನು ತುಂಬುವುದಕ್ಕಾಗಿ ತುಂಬಿದ ಕೊಡವೇ ಭಾಗಬೇಕಾಗುತ್ತದೆ. ಇದರಿಂದ ತಿಳಿದು ಬರುವುದೇನೆಂದರೆ, ಪೂರ್ಣ ಖಾಲಿ ಇರುವ ಅಥವಾ ಅರ್ಧ ತುಂಬಿದ ವ್ಯಕ್ತಿಯು ಅಹಂಕಾರಿಯಾಗಿರುತ್ತಾನೆ. ಅವನು ಬಗ್ಗಲು ಸಾಧ್ಯವಾಗುವುದಿಲ್ಲ. ಆದರೆ ಪರಿಪೂರ್ಣವಾದ ವ್ಯಕ್ತಿಯೇ ವಿನಮ್ರನಾಗಿರುತ್ತಾನೆ. ಅಂದರೆ ವಿನಮ್ರತೆಯು ಪರಿಪೂರ್ಣತೆಯ ಲಕ್ಷಣ.

ಅರ್ಧ ತುಂಬಿದ ಕೊಡವು ಸದ್ದು ಮಾಡುವುದು. ದುರಹಂಕಾರ ಹಾಗೂ ದುರಭಿಮಾನಾದಿಗಳಿಗೆ ಅಪೂರ್ಣತೆಯೇ ಕಾರಣ. ಆದ್ದರಿಂದ ವಿನಮ್ರತೆಯನ್ನು ಸಂಪಾದಿಸಿಕೊಳ್ಳಬೇಕಾದರೆ ತಾನು ಪರಿ ಪೂರ್ಣನಾಗಿರಬೇಕು. ಸಾಂಸಾರಿಕ ಯಾವುದೇ ವಸ್ತುಗಳನ್ನು ಸಂಪಾದಿಸಿ ಪರಿಪೂರ್ಣನಾಗಲು ಸಾಧ್ಯವಾಗುವುದಿಲ್ಲ. ಏನನ್ನೇ ಪಡೆದುಕೊಂಡರೂ ಇನ್ನೂ ಪಡೆದುಕೊಳ್ಳಬೇಕಾದದ್ದು ಬಹಳಷ್ಟು ಇರುತ್ತದೆ. ಅಪೇಕ್ಷೆಗಳು ಹೆಚ್ಚಾದಂತೆ ಮನುಷ್ಯನ ಮನಸ್ಸು ವಿಚಲಿತಗೊಳ್ಳುವುದು. ಇದರಿಂದ ಮನುಷ್ಯನು ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಆದ್ದರಿಂದ ದೊರೆತದ್ದರಲ್ಲಿ ಸಮಾಧಾನಿಯಾಗಿರುವ, ಅಹಂಕಾರ ಶೂನ್ಯನಾದ ವ್ಯಕ್ತಿಯು ವಿನಮ್ರನಾಗಿರುವುದರಿಂದ ಈ ವಿನಮ್ರತೆಯು ವ್ಯಕ್ತಿಯ ಉತ್ತಮವಾದ ಆರೋಗ್ಯಕ್ಕೆ ಕಾರಣವಾಗುವುದು. ಆತ್ಮಜ್ಞಾನವನ್ನು ಪಡೆದುಕೊಂಡು ಸರ್ವವೆಲ್ಲವೂ ತಾನೇ ಆದ ಬಳಿಕ ಅವನಲ್ಲಿ ಯಾವ ಅಪೇಕ್ಷೆಗಳೂ ಉಳಿಯುವುದಿಲ್ಲ. ಹೀಗೆ ನಿರಪೇಕ್ಷಿತನಾದ ಮತ್ತು ಪರಿಪೂರ್ಣ ಭಾವನೆಯ ವ್ಯಕ್ತಿ ಮಾತ್ರ ವಿನಮ್ರನಾಗಿರಲು ಸಾಧ್ಯ. ಇಂತಹ ವಿನಮ್ರತೆಯು ಉತ್ತಮ ಆರೋಗ್ಯಕ್ಕೆ ಕಾರಣವಾಗುವುದರಿಂದ ಚರಕ ಮಹರ್ಷಿ ಗಳು ವಿನಮ್ರತೆಯನ್ನೂ ಒಂದು ರಾಸಾಯನವನ್ನಾಗಿ ಬೋಧಿಸಿದ್ದಾರೆ. ಕಾರಣ ಪ್ರತಿಯೊಬ್ಬರೂ ಗುರುಹಿರಿಯರಲ್ಲಿ ವಿನಮ್ರತೆ ಉಳ್ಳವರಾಗಿ ಪ್ರಶಾಂತ ಮನಸ್ಕರಾಗಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು.