ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ  
ನ್ಯೂಸ್

ಡಿಜಿಟಲ್ ತಂತ್ರಜ್ಞಾನದಿಂದ ಮಾನವೀಯ ಸ್ಪರ್ಶ ಅಸಾಧ್ಯ: ಡಾ.ಎಚ್.ಬಸವನಗೌಡಪ್ಪ ಅಭಿಪ್ರಾಯ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಮಾನವೀಯ ಸ್ಪರ್ಶವನ್ನು ಯಾವುದೇ ರೋಬಾಟ್, ತಂತ್ರಜ್ಞಾನ ಪ್ರತಿರೂಪಿಸಲು ಸಾಧ್ಯವಿಲ್ಲ
  • ಕೃತಕ ಬುದ್ಧಿಮತ್ತೆಯು ಮನುಷ್ಯರನ್ನು ಅಥವಾ ನರ್ಸ್‌ಗಳನ್ನು ಬದಲಾಯಿಸುವುದಿಲ್ಲ
ಮೈಸೂರು:ಡಿಜಿಟಲ್ ತಂತ್ರಜ್ಞಾನವು ಎಂದಿಗೂ ಮಾನವೀಯ ಸ್ಪರ್ಶವನ್ನು ತಂದು ಕೊಡಲಾಗದು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್.ಬಸವನಗೌಡಪ್ಪ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ‘ಸಾಕ್ಷ್ಯಾಧಾರದಿಂದ ಉನ್ನತಿಯತ್ತ’ ವಿಷಯ ಕುರಿತ ರಾಷ್ಟಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ನರ್ಸ್‌ಗಳ ಮಾನವೀಯ ಸ್ಪರ್ಶಕ್ಕೆ ಯಾವುದೇ ಯಂತ್ರವೂ ಪರ್ಯಾಯವಾಗಲೂ ಸಾಧ್ಯವಿಲ್ಲ. ಡಿಜಿಟಲ್ ತಂತ್ರಜ್ಞಾನವು ಮಾನವೀಯ ಸ್ಪರ್ಶವನ್ನು ಎಂದಿಗೂ ಬದಲಾಯಿಸಲಾರದು. ಆದ್ದರಿಂದ ನರ್ಸ್‌ಗಳಿಗೆ ಯಾವುದೇ ಸೇವೆ ಸಾಟಿಯಲ್ಲ ಎಂದು ಹೇಳಿದರು.
ನರ್ಸ್‌ಗಳು ರೋಗಿಗಳೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಅಂತಃಕರಣದ ಮೂಲಕ ಮಾತನಾಡುತ್ತಾರೆ. ಈ ಮಾನವೀಯ ಸ್ಪರ್ಶವನ್ನು ಯಾವುದೇ ರೋಬಾಟ್, ತಂತ್ರಜ್ಞಾನ ಪ್ರತಿರೂಪಿಸಲು ಸಾಧ್ಯವಿಲ್ಲ ಎಂದರು. ಫ್ಲಾರೆನ್ಸ್ ನೈಟಿಂಗೇಲ್ ಅವರು ಹೇಳಿರುವಂತೆ ನರ್ಸಿಂಗ್ ಒಂದು ಕಲೆ. ಅದನ್ನು ಕಲೆ ಎಂದು ರೂಪಿಸಬೇಕಾದರೆ ಒಬ್ಬ ಉತ್ತಮ ಚಿತ್ರಕಾರ ಅಥವಾ ಶಿಲ್ಪಿಯಂತೆ ಸಮರ್ಪಣೆ, ಪರಿಶ್ರಮ ಮತ್ತು ತಯಾರಿ ಅಗತ್ಯ ಎಂದು ಹೇಳಿದರು.
ನರ್ಸ್‌ಗಳು ಪ್ರತಿಯೊಬ್ಬ ಮಾನವನಿಗೂ ಸೇವೆ ನೀಡುವಾಗ ಅತ್ಯಂತ ಸಮರ್ಪಣೆ ಮತ್ತು ಜಾಗ್ರತೆ ಅಗತ್ಯ. ಸಣ್ಣ ತಪ್ಪು ಕೂಡ ಆಗದಂತೆ ನೋಡಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಮನುಷ್ಯರನ್ನು ಅಥವಾ ನರ್ಸ್‌ಗಳನ್ನು ಬದಲಾಯಿಸುವುದಿಲ್ಲ. ಆದರೆ ಎಐ ಬಳಸುವವರು, ಎಐ ಬಳಸದೆ ಇರುವವರನ್ನು ಬದಲಾಯಿಸುತ್ತಾರೆ. ಎಐ ಅನ್ನು ಅಳವಡಿಸಿಕೊಳ್ಳದವರು ಹಿಂದೆ ಬೀಳುತ್ತಾರೆ. ಹೀಗಾಗಿ ಗುರಿಯನ್ನು ಸಾಧಿಸಲು ಇಂತಹ ಸಮ್ಮೇಳನ ಎಲ್ಲರಿಗೂ ಪ್ರೇರಣೆಯಾಗಬೇಕು. ಜ್ಞಾನ, ಸಂಶೋಧನೆ ಮತ್ತು ಪ್ರಸ್ತುತ ಸಾಕ್ಷ್ಯಗಳನ್ನು ಅರ್ಥಮಾಡಿಕೊಂಡು ನರ್ಸಿಂಗ್ ಅಭ್ಯಾಸವನ್ನು ಮುಂದುವರಿಸಲು ಮತ್ತು ನಾಯಕತ್ವವನ್ನು ಬೆಳೆಸಲು ಇವುಗಳು ಸಹಾಯವಾಗಬೇಕು ಎಂದರು.
ಇಂದಿನ ಆರೋಗ್ಯ ಸೇವಾ ವ್ಯವಸ್ಥೆ ಅತಿ ವೇಗವಾಗಿ ಬದಲಾಗುತ್ತಿದೆ. ಇಂತಹ ವೇಗವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಸಾಕ್ಷ್ಯಾಧಾರಿತ ಅಭ್ಯಾಸ ಉತ್ತಮ ಗುಣಮಟ್ಟದ ರೋಗಿ ಸೇವೆಯ ಮೂಲಸ್ತಂಭವಾಗಿ ಪರಿಣಮಿಸಿದೆ. ನರ್ಸ್‌ಗಳು ಇತರ ಯಾವುದೇ ವೈದ್ಯಕೀಯ ವೃತ್ತಿಪರರಿಗಿಂತ ರೋಗಿಗಳ ಜತೆ ಹೆಚ್ಚು ಸಮಯ ಕಳೆಯುತ್ತಾರೆ. ಅವರು ಸಂಶೋಧನೆಯನ್ನು ಅರ್ಥಪೂರ್ಣವಾಗಿ ರೋಗಿಗಳ ಉತ್ತಮ ಫಲಿತಾಂಶಗಳಾಗಿ ಪರಿವರ್ತಿಸುತ್ತಾರೆ. ನರ್ಸಿಂಗ್ ಅಭ್ಯಾಸವು ದೃಢವಾದ ಸಾಕ್ಷ್ಯಾಧಾರಗಳ ಮೇಲೆ ಆಧಾರಿತವಾಗಿರುವಾಗ, ಅದು ಸಾಮಾನ್ಯ ಸೇವೆಯಿಂದ ನಿಜವಾದ ವೈದ್ಯಕೀಯ ಶ್ರೇಷ್ಠತೆಗೆ ಏರುತ್ತದೆ ಎಂದರು.
ನರ್ಸ್‌ಗಳು ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಆರೋಗ್ಯ ನೀತಿಗಳ ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂತಹ ಸಮ್ಮೇಳನಗಳು ಸಂಶೋಧನೆ ಮತ್ತು ನೈಜ ಜೀವನದ ವೈದ್ಯಕೀಯ ಅಭ್ಯಾಸಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಅತ್ಯಂತ ಮೌಲ್ಯಯುತ ವೇದಿಕೆಗಳಾಗಿವೆ ಎಂದು ಹೇಳಿದರು.
ವೈದ್ಯರು ಮತ್ತು ನರ್ಸ್‌ಗಳಂತಹ ವೃತ್ತಿಪರರ ಅಂತಿಮ ಗುರಿ ರೋಗಿಗಳಿಗೆ ಹೆಚ್ಚು ಆರಾಮ ನೀಡುವುದು, ನೋವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯವನ್ನು ಸುಧಾರಿಸುವುದಾಗಿದೆ. ಅದನ್ನು ಸಾಧಿಸಲು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಯುವ ವೃತ್ತಿಪರರನ್ನು ನಾಯಕತ್ವಕ್ಕೆ ಪ್ರೋತ್ಸಾಹಿಸಬೇಕು, ಅವರು ಸಂಶೋಧನೆಗಳನ್ನು ಮಂಡಿಸಲು ಅವಕಾಶ ನೀಡಬೇಕು ಮತ್ತು ನರ್ಸಿಂಗ್ ಕ್ಷೇತ್ರದಲ್ಲಿ ನಿರಂತರ ಸುಧಾರಣೆಯ ಸಂಸ್ಕೃತಿಯನ್ನು ಬಲಪಡಿಸಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಅಶ್ವದಿ, ವಿವಿಧ ವಿಭಾಗದ ಡಾ.ಭವ್ಯಾ, ಡಾ.ಶಾರದಾ ರಮೇಶ್ ಇತರರು ಇದ್ದರು.