ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಡಾ. ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಪುಷ್ಪನಮನ ಸಲ್ಲಿಸಿದರು. ಚಂದ್ರಪ್ಪ, ಸುರೇಶಬಾಬು, ಎಲ್.ಚಂದ್ರಪ್ಪ, ಲಲಿತಮ್ಮ, ಜ್ಯೋತಿ ಇತರರಿದ್ದರು.  
ನ್ಯೂಸ್

ಮಾನವ ಸಂಪನ್ಮೂಲ ಸದ್ಬಳಕೆ

ಶಿವಕುಮಾರ ಎಸ್.ಪಿ.

ಸಾಗರ: ಭಾರತದ ಆರ್ಥಿಕ ವ್ಯವಸ್ಥೆ ಸದೃಢವಾಗಲು ಡಾ. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆ ಸ್ಮರಣಾರ್ಹ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಮಾನವ ಸಂಪನ್ಮೂಲದ ಸದ್ಬಳಕೆಯನ್ನು ತೋರಿಸಿಕೊಟ್ಟು ಹೊಸ ಭಾಷ್ಯ ಬರೆದರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಗಾಂಧಿ ಮಂದಿರದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸಲಹೆಗಾರ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಪ್ರಾಧಿಕಾರದ ಮುಖ್ಯಸ್ಥ, ಹಣಕಾಸು ಸಚಿವ, ಪ್ರಧಾನ ಮಂತ್ರಿಯಾಗಿ ಮನಮೋಹನ್ ಸಿಂಗ್ ನೀಡಿದ ಕೊಡುಗೆ ಗಮನಾರ್ಹವಾದುದು ಎಂದರು.

2004ರಲ್ಲಿ ದೇಶದ 13ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಮನಮೋಹನ್ ಸಿಂಗ್ ಎರಡು ಬಾರಿ ಪ್ರಧಾನಿಯಾಗಿ ಹತ್ತು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಕೆ.ಎನ್.ವೆಂಕಟಗಿರಿ ಮಾತನಾಡಿ, ಡಾ. ಮನಮೋಹನ್ ಸಿಂಗ್ ಸದಾ ನೆನಪಿನಲ್ಲಿ ಉಳಿಯುವ ರಾಜಕಾರಣಿ. ಅವರ ಕೊಡುಗೆಯನ್ನು ಪ್ರತಿ ಭಾರತೀಯನೂ ಸ್ಮರಿಸಬೇಕು. 1990ರಲ್ಲಿ ವಿದೇಶಿ ವಿನಿಮಯ ದರ ಪಾತಾಳಕ್ಕೆ ಕುಸಿದು ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಪ್ರಬಲ ವಿರೋಧದ ನಡುವೆಯೂ ಉದಾರೀಕರಣದ ನಿರ್ಧಾರ ತೆಗೆದುಕೊಂಡರು ಎಂದರು.

ಮುಕ್ತ ಮಾರುಕಟ್ಟೆ ಆಯ್ಕೆ ಸ್ವಾತಂತ್ರೃ, ಐಟಿಬಿಟಿ, ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಜತೆಗೆ ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತೆ, ಮಾಹಿತಿ ಹಕ್ಕು, ಅರಣ್ಯ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದ ಕೀರ್ತಿ ಮನಮೋಹನ್ ಸಿಂಗ್ ಅವರದು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಸುರೇಶಬಾಬು, ಎಲ್.ಚಂದ್ರಪ್ಪ, ಮಹಾಬಲ ಕೌತಿ, ಲಲಿತಮ್ಮ, ಜ್ಯೋತಿ, ಗಣಪತಿ ಮಂಡಗಳಲೆ, ಜಾಕೀರ್, ರವಿ ಇತರರಿದ್ದರು.