LPG  
ನ್ಯೂಸ್

ಭಾರಿ ಪ್ರಮಾಣದ ಅಕ್ರಮ ಗ್ಯಾಸ್ ಸಿಲಿಂಡರ್ ದಾಸ್ತಾನು

ವಿವಿಧ ಕಂಪನಿಯ 528 ಸಿಲಿಂಡರ್ ಪತ್ತೆ, ಭೈರವೇಶ್ವರ ಎಂಟರ್ ಪ್ರೈ. ವಿರುದ್ಧ ಎ್ಐಆರ್

ಬೆಂಗಳೂರು: ಕಳೆದ ಹತ್ತು ತಿಂಗಳಿಂದ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕ ಸಿಗದ ಜನಸಾಮಾನ್ಯರು ಪರದಾಡುತ್ತಿರುವ ಬೆನ್ನಲ್ಲೇ ಬಾಗಲಗುಂಟೆ ವ್ಯಾಪ್ತಿಯ ಟಿ.ದಾಸರಹಳ್ಳಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 528 ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಭೈರವೇಶ್ವರ ಎಂಟರ್ ಪ್ರೈಸೆಸ್ ಮಳಿಗೆಯಲ್ಲಿ ಯಾವುದೇ ಪರವಾನಗೆ ಇಲ್ಲದೇ 192 ಇಂಡೋ ಗ್ಯಾಸ್ ಸಿಲಿಂಡರ್, 164 ಪವರ್ ಗ್ಯಾಸ್ ಸಿಲಿಂಡರ್, 16 ಹೆಚ್.ಪಿ, 111 ಇತರೆ ಖಾಸಗಿ ಕಂಪನಿಗೆ ಸೇರಿದ ಗ್ಯಾಸ್ ಸಿಲಿಂಡರ್‌ಗಳನ್ನು ಪತ್ತೆಯಾಗಿವೆ.

ಬೆಂಗಳೂರು ಉತ್ತರ ತಾಲೂಕು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಹಾರ ನಿರೀಕ್ಷಕ ಸಿ.ಪ್ರಸನ್ನಕುಮಾರ್ ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯವಾಗುವ ರೀತಿಯಲ್ಲಿ ಅಪಾರ ಪ್ರಮಾಣದ ವಾಣಿಜ್ಯ ಹಾಗೂ ಖಾಸಗಿ ಕಂಪನಿ ಅಡುಗೆ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ. ಖಚಿತ ಮಾಹಿತಿ ಮೆರೆಗೆ ಅ.15ರಂದು ರಾತ್ರಿ ದಾಳಿ ಮಾಡಿದ ಆಹಾರ ಇಲಾಖೆ ಅಧಿಕಾರಿಗಳು ಅಕ್ರಮ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಸ್ತಾನು ಪರಿಶೀಲಿಸಿದಾಗ ಯಾವುದೇ ಅಗ್ನಿಶಾಮಕ ಉಪಕರಣಗಳಾಗಲಿ ಅಥವಾ ಶಾಸನಬದ್ಧ ಸುರಕ್ಷತಾ ಅಕ್ರಮಗಳಾಗಲಿ ಇರಿಲಿಲ್ಲ. ಇಷ್ಟೊಂದು ಪ್ರಮಾಣದ ಸ್ಫೋಟಕ ಅನಿಲ ದಾಸ್ತಾನು ಮಾಡಲು ಪೆಟ್ರೋಲಿಯಂ ಮತ್ತು ಸುರಕ್ಷತಾ ಸಂಸ್ಥೆ (ಪಿಇಎಸ್‌ಒ), ಅಗ್ನಿಶಾಮಕದಳ ಅಥವಾ ಸಂಬಂಧ ಪಟ್ಟ ತೈಲ ಕಂಪನಿಗಳಿಗೆ ಪಡೆದ ಅಧಿಕೃತ ಡೀಲರ್ಶಿಪ್ ದಾಖಲೆಗಳು ಇಲ್ಲದಿರುವುದು ಅಧಿಕಾರಿಗಳಿಗೆ ಕಂಡು ಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಶಕ್ಕೆ ಪಡೆದ ಅಕ್ರಮ ಸಿಲಿಂಡರ್‌ಗಳನ್ನು ಅಧಿಕೃತ ಏಜೆನ್ಸಿಯಾಗಿರುವ ಕಮಲಾ ಎಚ್‌ಪಿ ಗ್ಯಾಸ್ ಕಂಪನಿ ಗೋದಾಮಿಗೆ ಅವುಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.