ಕೋಲ್ಕತ್ತಾ: 11ವರ್ಷದ ಬಾಲಕಿಯಯನ್ನು ಸಂಬಂಧಿಯೊಬ್ಬ ಶಿರಚ್ಛೇದ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಹಿಂದೆ ಬಾಲಕಿ ಹಲವು ಬಾರಿ ಸಾರ್ವಜನಿಕವಾಗಿ ಅವಮಾನಿಸಿದ್ದರಿಂದ ನಾನು ಆಕೆಯನ್ನು ಕೊಂದಿರುವುದಾಗಿ ಆರೋಪಿ ಆಕೆಯ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾನೆ.
ಜನವರಿ 29ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮುಂಡ ಮತ್ತು ರುಂಡ ಮಾಲ್ಡಾ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಆದರಿಸಿ ಪತ್ತೆಹಚ್ಚಲಾಗಿದೆ. ಹುಡುಗಿ ಕಾಣೆಯಾಗುವ ಮೊದಲು ಆತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದ.
ಆರೋಪಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಯತ್ನಿಸಿದ. ಆದರೆ ನಂತರ ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯನ್ನು ಖಂಡಿಸಿ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೃತ್ಯ ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಪ್ರತಿಭಟನೆ ಮತ್ತು ಮೌನ ಮೆರವಣಿಗೆ ನಡೆಸಿದ್ದವು.