ನ್ಯೂಸ್

ಭಾರತದ ಬತ್ತಳಿಕೆಗೆ ಬಿಳಿ ಚಿನ್ನ; ಲಿಥಿಯಂನ ಬೃಹತ್ ಪ್ರಮಾಣದ ನಿಕ್ಷೇಪ ಕಾಶ್ಮೀರದಲ್ಲಿ ಪತ್ತೆ

ವಿದ್ಯುತ್ ವಾಹನಗಳ ಬ್ಯಾಟರಿಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಲಿಥಿಯಂನ ಬೃಹತ್ ಪ್ರಮಾಣದ ನಿಕ್ಷೇಪ ಕಾಶ್ಮೀರದಲ್ಲಿ ಪತ್ತೆಯಾಗಿದೆ. ಭವಿಷ್ಯದಲ್ಲಿ ಪೆಟ್ರೋಲ್​ಗಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಬಹುದಾದ ಲಿಥಿಯಂ ನಿಕ್ಷೇಪದಿಂದ ಭಾರತದಲ್ಲಿ ಇ-ವಾಹನಗಳ ತಯಾರಿಕೆ ವೆಚ್ಚವೂ ತಗ್ಗಬಹುದಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ಲಿಥಿಯಂ ಸಂಪನ್ಮೂಲ ಅಗಾಧ ಪ್ರಮಾಣದಲ್ಲಿ ಇರುವುದನ್ನು ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾಲಯ (ಜಿಎಸ್​ಐ) ಪತ್ತೆಮಾಡಿದೆ. ಇಲ್ಲಿ 59 ಲಕ್ಷ ಟನ್​ನಷ್ಟು ಲಿಥಿಯಂ ಖನಿಜ ಸಂಪತ್ತು ಇರಬಹುದೆಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಲಿಥಿಯಂ ಪತ್ತೆಯಾಗಿರುವುದು ಇದೇ ಮೊದಲು. ‘ಬಿಳಿ ಚಿನ್ನ’ ಲಿಥಿಯಂ ಶೋಧ ಭಾರತಕ್ಕೆ ಬಂಪರ್ ಲಾಟರಿ ಎಂದೇ ಪರಿಗಣಿಸಬಹುದಾಗಿದೆ.

ಖನಿಜಗಳ ಪೈಕಿ ಅಮೂಲ್ಯ ಮತ್ತು ಪ್ರಮುಖ ಲೋಹವಾಗಿದೆ ಲಿಥಿಯಂ. ವಿದ್ಯುತ್ ವಾಹನಗಳ ಬಳಕೆ ಹೆಚ್ಚುತ್ತಿರುವುದರಿಂದ ಈ ಲೋಹಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ವಿದ್ಯುತ್ ವಾಹನಗಳು, ಮೊಬೈಲ್​ಫೋನ್​ಗಳು ಮತ್ತು ಇತರ ಹಲವು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಉಪಯೋಗಿಸಲಾಗುವ ಬ್ಯಾಟರಿಗಳ ತಯಾರಿಕೆಯಲ್ಲಿ ಬಳಸುವ ನಿರ್ಣಾಯಕ ವಸ್ತು ಲಿಥಿಯಂ. ಬೆಳ್ಳಿ-ಬಿಳಿ ಬಣ್ಣದ ಮೃದುವಾದ ಹಾಗೂ ಅಪಾರ ಬೇಡಿಕೆಯುಳ್ಳ ಲೋಹವಾದ್ದರಿಂದ ಇದನ್ನು ‘ಬಿಳಿ ಚಿನ್ನ’ಎಂದೂ ಕರೆಯಲಾಗುತ್ತದೆ.

ಏಕೆ ಬೇಡಿಕೆ?: ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಹಾಗೂ ಮೊಬೈಲ್​ಫೋನ್ ಸಾಧನಗಳಲ್ಲಿ ಬಳಸುವ ಲಿಥಿಯಂ ಅನ್ನು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಈಗ ಕಾಶ್ಮೀರದಲ್ಲಿ ಪತ್ತೆಯಾಗಿರುವ ಲಿಥಿಯಂ ನಿಕ್ಷೇಪಗಳಿಂದಾಗಿ ಆಮದು ಅವಲಂಬನೆ ತಗ್ಗುವ ನಿರೀಕ್ಷೆ ಚಿಗುರೊಡೆದಿದೆ. ಮತ್ತು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ವಿಸ್ತರಿಸುವ ಸರ್ಕಾರದ ಯೋಜನೆಗಳಿಗೆ ಉತ್ತೇಜನಕಾರಿಯಾಗಿ ಪರಿಣಮಿಸಲಿದೆ.

ಪ್ರಪಂಚವು ಈಗ ಗ್ಯಾಸೋಲಿನ್ (ಪೆಟ್ರೋಲ್) ಮತ್ತು ಡೀಸೆಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆ ಆಗುತ್ತಿದೆ. ತೈಲ ಬೆಲೆ ಏರಿಕೆ ಇದಕ್ಕೆ ಪ್ರಮುಖ ಕಾರಣವಾದರೆ, ವಿದ್ಯುತ್ ವಾಹನಗಳಿಂದ ಪರಿಸರ ಮಾಲಿನ್ಯ ಕಡಿಮೆ ಎಂಬುದು ಇನ್ನೊಂದು ಅಂಶ.

ಇ-ವಾಹನಗಳಿಗೆ ಬೇಡಿಕೆ ಕುದುರುತ್ತಿರುವಂತೆಯೇ ಲಿಥಿಯಂಗೂ ಸಹಜವಾಗಿಯೇ ಡಿಮಾಂಡು ಜಾಸ್ತಿಯಾಗಿದೆ. ಲಿಥಿಯಂ ಅನ್ನು ಲ್ಯಾಪ್​ಟಾಪ್, ಮೊಬೈಲ್ ಫೋನ್​ಗಳಂತಹ ಗ್ಯಾಜೆಟ್​ಗಳ ಬ್ಯಾಟರಿಗಳಲ್ಲಿಯೂ ಬಳಸಲಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ತೈಲ ಮತ್ತು ಅನಿಲಕ್ಕಿಂತ ಹೆಚ್ಚು ಮಹತ್ವ ಹಾಗೂ ಬೇಡಿಕೆಯನ್ನು ಲಿಥಿಯಂ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಅಗಾಧ ಕೊರತೆ

ಪ್ರಪಂಚದಲ್ಲಿ ಲಿಥಿಯಂ ಪೂರೈಕೆಯು ಅದರ ಬೇಡಿಕೆಗಿಂತ ಸಾಕಷ್ಟು ಕಡಿಮೆ ಇದೆ. 2025ರ ವೇಳೆಗೆ ಪ್ರಪಂಚವು ಲಿಥಿಯಂ ಕೊರತೆಯನ್ನು ವ್ಯಾಪಕ ಪ್ರಮಾಣದಲ್ಲಿ ಎದುರಿಸಬಹುದು ಎಂದು ಇಂಟರ್​ನ್ಯಾನಲ್ ಎನರ್ಜಿ ಏಜೆನ್ಸಿಯ ವರದಿ ಹೇಳುತ್ತದೆ. ವಿದ್ಯುತ್ ವಾಹನಗಳು ಮತ್ತು ಪುನರ್​ಭರ್ತಿ ಮಾಡಬಹುದಾದ ಬ್ಯಾಟರಿಗಳ ಬೇಡಿಕೆಯಿಂದಾಗಿ ಲಿಥಿಯಂ ಬ್ಯಾಟರಿಗಳ ಕೊರತೆ 2050ರ ವೇಳೆಗೆ ಇನ್ನೂರು ಕೋಟಿಗೆ ತಲುಪುವ ಅಂದಾಜಿದೆ.

ಹಲವು ಉಪಯೋಗ

ವಿದ್ಯುತ್ ವಾಹನಗಳು, ಲ್ಯಾಪ್​ಟಾಪ್​ಗಳು, ಮೊಬೈಲ್​ಗಳು ಮತ್ತು ಇತರ ಸಾಧನಗಳಿಗೆ ಬ್ಯಾಟರಿಗಳಲ್ಲಿ ಬಳಸುವ ಎಲೆಕ್ಟ್ರೋಕೆಮಿಕಲ್ ಕೋಶಗಳ ಪ್ರಮುಖ ವಸ್ತು ಇದಾಗಿದೆ. ಇದನ್ನು ಥರ್ವೇನ್ಯೂಕ್ಲಿಯರ್ ಪ್ರತಿಕ್ರಿಯೆಗಳಲ್ಲಿಯೂ ಬಳಸಲಾಗುತ್ತದೆ. ಇದಲ್ಲದೆ, ಅಲ್ಯೂಮಿನಿಯಂ ಮತ್ತು ಮೆಗ್ನೀಷಿಯಮ್ ಜತೆಗೆ ಮಿಶ್ರಲೋಹಗಳನ್ನು ತಯಾರಿಸಲು ಲಿಥಿಯಂ ಬಳಕೆಯಾಗುತ್ತದೆ. ಇದರಿಂದಾಗಿ ಮಿಶ್ರ ಲೋಹಗಳ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ತೂಕವನ್ನು ಹಗುರ ಮಾಡುತ್ತದೆ. ಮೆಗ್ನೀಷಿಯಮ್​ಲಿಥಿಯಂ ಮಿಶ್ರಲೋಹವನ್ನು ರಕ್ಷಾಕವಚದ ಲೇಪನಕ್ಕಾಗಿ ಬಳಸಲಾಗುತ್ತದೆ. ಅಲ್ಯೂಮಿನಿಯಂ-ಲಿಥಿಯಂ ಮಿಶ್ರಲೋಹಗಳನ್ನು ವಿಮಾನ, ಬೈಸಿಕಲ್ ಚೌಕಟ್ಟುಗಳು ಮತ್ತು ಹೆಚ್ಚಿನ ವೇಗದ ರೈಲುಗಳ ನಿರ್ವಣದಲ್ಲಿ ಬಳಸಲಾಗುತ್ತದೆ. ಗಾಜು ಮತ್ತು ಸಿರಾಮಿಕ್ಸ್ ಕೈಗಾರಿಕೆಗಳಲ್ಲಿಯೂ ಲಿಥಿಯಂ ಉಪಯೋಗಿಸಲಾಗುತ್ತದೆ.

ಇನ್ನಷ್ಟು ಅಧ್ಯಯನ ಅಗತ್ಯ

ದೊಡ್ಡ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ಮೀಸಲು ಇದೆ ಎಂದ ಮಾತ್ರಕ್ಕೆ ಅದೆಲ್ಲವನ್ನು ಬ್ಯಾಟರಿಗಳ ತಯಾರಿಕೆಗೆ ಬಳಸಬಹುದಾಗಿದೆ ಎಂದಲ್ಲ. ಈ ಖನಿಜ ನಿಕ್ಷೇಪದ ಗುಣಮಟ್ಟದ ಮೇಲೆ ಅದು ನಿರ್ಧಾರವಾಗುತ್ತದೆ ಎನ್ನುತ್ತಾರೆ ತಜ್ಞರು. ಈಗ ಗುರುತಿಸಲಾದ ಪ್ರದೇಶದಲ್ಲಿ ಎಷ್ಟು ಟನ್ ಲೋಹ ಲಭ್ಯವಿದೆ, ಎಷ್ಟು ಹೊರತೆಗೆಯಬಹುದು ಮತ್ತು ಅದರ ಗುಣಮಟ್ಟ ಹೇಗಿದೆ ಎಂಬುದನ್ನು ನಿಖರವಾಗಿ ತಿಳಿಯಲು ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ. ಕಾಶ್ಮೀರದಲ್ಲಿ ಪತ್ತೆಯಾಗಿರುವ ಲಿಥಿಯಂ ನಿಕ್ಷೇಪವು ಬ್ಯಾಟರಿಗಳ ತಯಾರಿಕೆಗೆ ಯೋಗ್ಯವಾಗಿದ್ದರೂ, ಅದನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಲು 5ರಿಂದ 7 ವರ್ಷಗಳು ಬೇಕಾಗಬಹುದು ಎಂದೂ ತಜ್ಞರು ಹೇಳುತ್ತಾರೆ.

ಭಾರತಕ್ಕೆ ಬಂಪರ್ ಲಾಟರಿ

ಲಿಥಿಯಂ ನಿಕ್ಷೇಪಗಳ ಆವಿಷ್ಕಾರವು ಭಾರತಕ್ಕೆ ಮಹತ್ವದ್ದಾಗಿದೆ. ಮಾಲಿನ್ಯ ಹೊರಸೂಸದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಉಪಯೋಗವಾಗುವ ಮೂಲಕ 2070ರ ವೇಳೆಗೆ ಮಾಲಿನ್ಯ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿಯನ್ನು ತಲುಪಲು ಇದು ನೆರವಾಗಬಹುದಾಗಿದೆ. ಭಾರತವು ಲಿಥಿಯಂ ಕೋಶಗಳು ಮತ್ತು ಬ್ಯಾಟರಿಗಳ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, 2017 ಮತ್ತು 2020 ನಡುವೆ 165 ಕೋಟಿಗೂ ಹೆಚ್ಚು ಲಿಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ದೇಶವು 27,333 ಕೋಟಿ ರೂಪಾಯಿ ಪಾವತಿಸಿದೆ. ವಿದ್ಯುತ್ ವಾಹನಗಳಿಗೆ ಅಗತ್ಯವಿರುವ ಶೇ. 70ರಷ್ಟು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಭಾರತವು ಚೀನಾ ಮತ್ತು ಹಾಂಕಾಂಗ್​ನಿಂದ ಆಮದು ಮಾಡಿಕೊಳ್ಳುತ್ತದೆ. ಈಗ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ವಿದೇಶಗಳ ಮೇಲಿನ ಅವಲಂಬನೆಯನ್ನು ಭಾರತವು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಕೆಲವೆಡೆ ಮಾತ್ರ ನಿಕ್ಷೇಪ

ಲಿಥಿಯಂ ಸಂಪನ್ಮೂಲಗಳು ಜಗತ್ತಿನ ಕೆಲವು ಸ್ಥಳಗಳಲ್ಲಿ ಕೇಂದ್ರೀಕೃತವಾಗಿವೆ. ಪ್ರಪಂಚದ ಲಿಥಿಯಂ ನಿಕ್ಷೇಪಗಳ ಪೈಕಿ ಅರ್ಧದಷ್ಟು ಅರ್ಜೆಂಟೀನಾ, ಬೊಲಿವಿಯಾ ಮತ್ತು ಚಿಲಿಯ ಉಪ್ಪು ಪ್ಲಾಟ್​ಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾವು ಅಂದಾಜು 57 ಲಕ್ಷ ಟನ್ ಲಿಥಿಯಂ ಸಂಪನ್ಮೂಲ ಹೊಂದಿದೆ.

ಮಂಡ್ಯದಲ್ಲಿ ಪತ್ತೆ

ಕರ್ನಾಟಕದಲ್ಲಿಯೂ ಅಲ್ಪಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ಇರುವುದು ಪತ್ತೆಯಾಗಿತ್ತು. ಮಂಡ್ಯ ಜಿಲ್ಲೆಯ ಮರಳಗಾಲ, ಅಲ್ಲಾಪಟ್ಟಣ ಪ್ರದೇಶದಲ್ಲಿ ಅಂದಾಜು 16 ಸಾವಿರ ಟನ್​ಗಳಷ್ಟು ಲಿಥಿಯಂ ನಿಕ್ಷೇಪ ಮೀಸಲು ಇರುವುದನ್ನು ಪ್ರಾಥಮಿಕ ಸಮೀಕ್ಷೆಯೊಂದು ತೋರಿಸಿತ್ತು. ಇದರ ಜೊತೆಗೆ, ಭಾರತದಲ್ಲಿ ಲಿಥಿಯಂ ನಿಕ್ಷೇಪಗಳ ಸಂಭಾವ್ಯ ತಾಣಗಳೆಂದರೆ ರಾಜಸ್ತಾನ, ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿನ ಮೈಕಾ ಪಟ್ಟಿಗಳು; ಒಡಿಶಾ ಮತ್ತು ಛತ್ತೀಸ್​ಗಢದಲ್ಲಿನ ಪೆಗ್ಮಟೈಟ್ ಪಟ್ಟಿಗಳು ಮತ್ತು ಗುಜರಾತ್​ನ ಕಚ್ ಪ್ರದೇಶ.

ಚೀನಾ ಪ್ರಾಬಲ್ಯ

ಕಚ್ಚಾ ಲಿಥಿಯಂ ಉತ್ಪನ್ನಗಳನ್ನು ಬ್ಯಾಟರಿಗಳಾಗಿ ಸಂಸ್ಕರಿಸುವ ಉದ್ಯಮದ ಬಹುಪಾಲು ಈಗ ಚೀನಾ ಕೈಯಲ್ಲಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯ 80 ಪ್ರತಿಶತದಷ್ಟಿದೆ ಎಂದು ಅಂದಾಜು ಮಾಡಲಾಗಿದೆ.