ನ್ಯೂಸ್

ಹಣ್ಣುಗಳ ಭವ್ಯಲೋಕ ಕರುನಾಡು: ಈ ವಿಶೇಷ ತಳಿಯ ಫಲಗಳಿಗೆ ಎಲ್ಲಿಲ್ಲದ ಬೇಡಿಕೆ!

ಬೆಂಗಳೂರು: ಕರ್ನಾಟಕದಲ್ಲಿ ಹಣ್ಣುಗಳು ತೋಟಗಾರಿಕೆ ಬೆಳೆಯಾಗಿ ಮಾತ್ರವಲ್ಲ, ಆಯಾ ಪ್ರದೇಶದ ಅಸ್ಮಿತೆಯಾಗಿ ಗುರುತಿಸಲ್ಪಡುತ್ತವೆ. ಮರೆಯಲಾಗದ ವಿಶೇಷ ಸ್ವಾದ, ಪೌಷ್ಟಿಕಾಂಶ, ಸಾಗಣೆ ಮಾಡಲು ಪೂರಕ, ಆರೋಗ್ಯಕ್ಕೆ ಹಿತಕಾರಕ- ಹೀಗೆ ಹಲವು ಅಂಶಗಳಿಂದ ಹಣ್ಣುಗಳು ಗಮನ ಸೆಳೆದಿವೆ. ರಫ್ತು ವಹಿವಾಟಿನ ಮೂಲಕ ಆರ್ಥಿಕ ಚಟುವಟಿಕೆಗಳಿಗೂ ಇಂಬು ನೀಡಿವೆ.

ವಿಜಯಪುರ ದ್ರಾಕ್ಷಿ

ಕರ್ನಾಟಕದಲ್ಲಿ 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಪೈಕಿ ವಿಜಯಪುರ ಜಿಲ್ಲೆಯೊಂದರಲ್ಲೇ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಹಾಗಾಗಿ, ವಿಜಯಪುರ ದ್ರಾಕ್ಷಿಯ ತವರೂರು ಎಂಬ ಹಿರಿಮೆಗೆ ಪಾತ್ರವಾಗಿದೆ. ಗುಣಮಟ್ಟದ ದ್ರಾಕ್ಷಿ ಇಲ್ಲಿ ಬೆಳೆಯಲಾಗುತ್ತಿದ್ದು, ವೈನ್ ತಯಾರಿಕೆಗೆ ತುಂಬ ಸೂಕ್ತವಾಗಿದೆ. ದ್ರಾಕ್ಷಿ ಬೆಳೆಯಿಂದಲೇ ಜಿಲ್ಲೆಯಲ್ಲಿ ಪ್ರತಿವರ್ಷ 2ರಿಂದ 3 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆಯೆಂದರೆ, ಇದರ ಅಗಾಧತೆಯನ್ನು ಊಹಿಸಬಹುದು. ಅಲ್ಲದೆ, ಇಲ್ಲಿನ ಗುಣಮಟ್ಟದ ಒಣದ್ರಾಕ್ಷಿಗೆ ವಿದೇಶಗಳಲ್ಲಿ ಬಹುದೊಡ್ಡ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಯುವ ಪ್ರದೇಶ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. 1 ಲಕ್ಷಕ್ಕೂ ಅಧಿಕ ಕೃಷಿ ಕುಟುಂಬಗಳು ದ್ರಾಕ್ಷಿ ಬೆಳೆಯನ್ನು ಅವಲಂಬಿಸಿದ್ದು, ಗ್ರಾಮೀಣ ಕೃಷಿ ಕಾರ್ವಿುಕರಿಗೆ ನಿರಂತರ ಉದ್ಯೋಗ ಒದಗಿಸುತ್ತಿವೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ವಿಜಯಪುರ ದ್ರಾಕ್ಷಿಗೆ ದೊಡ್ಡಮಟ್ಟದ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಯುವರೈತರು ಕೂಡ ದ್ರಾಕ್ಷಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆ.

ಕೊಡಗಿನ ಕಿತ್ತಳೆ

ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಿತ್ತಳೆ ಬೆಳೆಯಲಾಗುತ್ತಿದ್ದು, ಈ ವಿಶಿಷ್ಟ ತಳಿ ‘ಕೊಡಗಿನ ಕಿತ್ತಳೆ’ ಎಂದೇ ಪ್ರಸಿದ್ಧವಾಗಿದೆ. ಹಸಿರು, ಹಳದಿ ಬಣ್ಣದ ಕಿತ್ತಳೆ ಸಿಹಿ ರುಚಿಯಿಂದ ಗ್ರಾಹಕರ ಮನಗೆದ್ದಿದೆ. ಗಾತ್ರದಲ್ಲಿ ಚಿಕ್ಕದಾದರೂ, ಉತ್ಕ ೃ್ಟವಾದ ರುಚಿಯನ್ನು ಹೊಂದಿದೆ. ಅಲ್ಲದೆ, ಇತರ ಪ್ರಭೇದಗಳಿಗೆ ಹೋಲಿಸಿದರೆ ಕೊಡಗಿನ ಕಿತ್ತಳೆ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಕೊಡಗಿನ ಕಿತ್ತಳೆಗೆ 2005-06ರಲ್ಲಿ ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಸ್ಥಾನಮಾನ ದೊರೆತಿದೆ. 1830ರ ಅವಧಿಯಲ್ಲಿ ಬ್ರಿಟಿಷರು ಮೊದಲ ಬಾರಿಗೆ ಕೊಡಗಿನ ಪರ್ವತ ಪ್ರದೇಶದ ಬಾಣೆ ಜಾಗದಲ್ಲಿ ಕಿತ್ತಳೆ ಬೆಳೆದರು. ಸದ್ಯ ಕೊಡಗಿನ ಕಿತ್ತಳೆ 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕಿತ್ತಳೆ ಬೆಳೆ ಬೆಲೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಕಳೆದ ವರ್ಷ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಸಕ್ತ ರೈತರಿಗೆ ಉಚಿತವಾಗಿ ಕಿತ್ತಳೆಯ ಸಸಿಗಳನ್ನು ವಿತರಿಸಲಾಗಿದೆ.

ಬೆಂಗಳೂರು ನೀಲಿದ್ರಾಕ್ಷಿ

ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿ ‘ಬ್ಲೂ ತಳಿ’ ಎಂದು ಪ್ರಸಿದ್ಧವಾಗಿದೆ. ಈ ದ್ರಾಕ್ಷಿ ನೀಲಿ ಬಣ್ಣ ಹೊಂದಿದ್ದು, ಆಕಾರ ಮತ್ತು ಸ್ವಾದಕ್ಕೆ ಹೆಸರುವಾಸಿ. ಕಳೆದ 150 ವರ್ಷಗಳಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ನೀಲಿದ್ರಾಕ್ಷಿ 2011ರಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ. ವಾರ್ಷಿಕವಾಗಿ 55 ಸಾವಿರ ಟನ್ ಬೆಳೆಯಲಾಗುತ್ತಿದ್ದು, ಜಾಮ್ ಜೆಲ್ಲಿ ತಯಾರಿಕೆಗೆ ಕೂಡ ಬಳಸಲಾಗುತ್ತಿದೆ. 4 ಸಾವಿರ ಟನ್ ವೈನ್ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಅಲ್ಲದೆ, ನೀಲಿದ್ರಾಕ್ಷಿ ಬೆಳೆಯುವ ಏಕೈಕ ರಾಜ್ಯ ಕರ್ನಾಟಕ. ಬೆಂಗಳೂರು ನೀಲಿದ್ರಾಕ್ಷಿಗೆ ತಮಿಳುನಾಡು, ಕೇರಳ ರಾಜ್ಯಗಳಿಂದ ಭಾರಿ ಬೇಡಿಕೆ ಇದೆ. ಈ ಹಣ್ಣು ವರ್ಷಪೂರ್ತಿ ಲಭ್ಯವಿರುತ್ತದೆ.

ದೇವನಹಳ್ಳಿ ಚಕ್ಕೋತ

ಕಿತ್ತಳೆ ಜಾತಿ ಹಣ್ಣುಗಳಲ್ಲೇ ದೊಡ್ಡ ಗಾತ್ರದ ಹಣ್ಣು ಚಕ್ಕೋತ. 350 ವರ್ಷಗಳ ಇತಿಹಾಸವಿರುವ ಚಕ್ಕೋತ ದೇವನಹಳ್ಳಿಯ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಹಿರಿಮೆಯೂ ಹೌದು. ದೇವನಹಳ್ಳಿ ಚಕ್ಕೋತ ಸಿಹಿ-ಹುಳಿಯ ಸಮ ಮಿಶ್ರಣದ ರುಚಿ ಹೊಂದಿದ್ದು, ವಿಶಿಷ್ಟ ಸುವಾಸನೆಯನ್ನು ಹೊಂದಿದೆ. ಗಾತ್ರದಲ್ಲಿ ಸಹ ದೊಡ್ಡದು. ಈ ಹಣ್ಣು ಶರ್ಕರ ಪಿಷ್ಟ, ಪ್ರೊಟೀನ್, ನಾರು ಸೇರಿಂತೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಪೂರಕ. ಹಬ್ಬದ ಸಂದರ್ಭಗಳಲ್ಲಂತೂ ಈ ಹಣ್ಣಿಗೆ ಭರ್ಜರಿ ಬೇಡಿಕೆ. ಜಿಐ ಟ್ಯಾಗ್ ಹೊಂದಿರುವ ದೇವನಹಳ್ಳಿ ಚಕ್ಕೋತವನ್ನು ಸಿಹಿತಂಡಿ ಹಾಗೂ ಜೆಲ್ಲಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೈಸೂರಿನ ಮಹಾರಾಜರು ಮತ್ತು ರಾಜಪರಿವಾರದವರು ಕೂಡ ಈ ಹಣ್ಣಿನ ರುಚಿಗೆ ಮನಸೋತಿದ್ದರು.

ಮುಖ್ಯಾಂಶಗಳು

  • ಸ್ಥಳೀಯ ಕೃಷಿ ಕಾರ್ವಿುಕರಿಗೆ ನಿರಂತರ ಕೆಲಸ ಒದಗಿಸುತ್ತಿರುವ ಹಣ್ಣು ಕೃಷಿ.
  • ಆರ್ಥಿಕ ಚಟುವಟಿಕೆಗಳಿಗೆ ವೇಗ ತಂದಿದ್ದು, ರೈತರ ಆದಾಯವನ್ನೂ ಹೆಚ್ಚಿಸಿದೆ.
  • ಆಯಾ ಪ್ರದೇಶಕ್ಕೆ ವಿಶಿಷ್ಟ ಗುರುತನ್ನು ಒದಗಿಸಿಕೊಟ್ಟು, ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ.
  • ಹೊರ ರಾಜ್ಯಗಳಲ್ಲೂ ಭಾರೀ ಬೇಡಿಕೆ

ಈ ಎಲ್ಲ ಹಣ್ಣುಗಳದ್ದು ಒಂದು ತೂಕವಾದರೆ ಮಾವಿನದೇ ಒಂದು ತೂಕ. ಅದರ ಬಗ್ಗೆ ಪ್ರತ್ಯೇಕ ಬರಹ ಪ್ರಕಟವಾಗಲಿದೆ.