ನ್ಯೂಸ್

ಅನಿಲ್ ಅಂಬಾನಿ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ: ಒಂದೇ ದಿನದಲ್ಲಿ 10% ಏರಿಕೆಯಾಗಿದ್ದೇಕೆ?

ಮುಂಬೈ: ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರುಗಳ ಬೆಲೆ ಸೋಮವಾರ 10 ಪ್ರತಿಶತಕ್ಕಿಂತ ಹೆಚ್ಚಿನ ಏರಿಕೆಯೊಂದಿಗೆ 185.65 ರೂ. ಮುಟ್ಟಿದೆ. ದಿನದ ವಹಿವಾಟಿನಲ್ಲಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರುಗಳ ಬೆಲೆ 192.15 ರೂ.ಗೆ ತಲುಪಿತ್ತು.

ಅನಿಲ್ ಅಂಬಾನಿ ಷೇರುಗಳಲ್ಲಿ ಬಿರುಗಾಳಿಯ ಏರಿಕೆ ಕಂಡುಬಂದಿದೆ. ಈಗ ಸಾಲ ಮರುಪಾವತಿಯ ಜೊತೆಗೆ ಹೊಸ ವ್ಯವಹಾರಕ್ಕೆ ತಯಾರಿ ನಡೆಸುತ್ತಿರುವುದೇ ಇದಕ್ಕೆ ಕಾರಣ.

ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಅಂಗಸಂಸ್ಥೆಯಾದ ರಿಲಯನ್ಸ್ ವೆಲಾಸಿಟಿ ಲಿಮಿಟೆಡ್ ಹೊಸ ಕಂಪನಿ ರಿಲಯನ್ಸ್ ಇವಿ ಪ್ರೈವೇಟ್ ಲಿಮಿಟೆಡ್ (REVPL) ಅನ್ನು ರಚಿಸಿದೆ. ಕಂಪನಿಯು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ಪಡೆದಿದೆ ಎಂದು ಹೇಳಿದೆ. ಸಂಯೋಜನೆಯ ಪ್ರಮಾಣಪತ್ರವನ್ನು ಸ್ವೀಕರಿಸಲಾಗಿದೆ. ರಿಲಯನ್ಸ್ ಇವಿ ಪ್ರೈವೇಟ್ ಲಿಮಿಟೆಡ್ ಅನ್ನು ಆಟೋಮೊಬೈಲ್ ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ ರಚಿಸಲಾಗಿದೆ.

ಅನಿಲ್ ಅಂಬಾನಿಯವರ ಕಂಪನಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ವಿದೇಶಿ ಕರೆನ್ಸಿ ಕನ್ವರ್ಟಿಬಲ್ ಬಾಂಡ್‌ಗಳ (ಎಫ್‌ಸಿಸಿಬಿ) ಮೂಲಕ 350 ಮಿಲಿಯನ್ ಡಾಲರ್​ (ರೂ. 3000 ಕೋಟಿ) ಸಂಗ್ರಹಿಸಲು ತಯಾರಿ ನಡೆಸುತ್ತಿದೆ. ಕಂಪನಿಯು ತನ್ನ ಸಾಲವನ್ನು (ರೂಪಾಯಿ ಸಾಲ) ಮರುಪಾವತಿ ಮಾಡಲು ಮತ್ತು ವಿದ್ಯುತ್ ಶಕ್ತಿ ಉತ್ಪಾದನೆಯಂತಹ ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಈ ಹಣವನ್ನು ಬಳಸುತ್ತದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಕಳೆದ ವಾರವೇ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ 4 ಹೊಸ ಅಂಗಸಂಸ್ಥೆಗಳನ್ನು ಆರಂಭಿಸಿದೆ. ಈ ಕಂಪನಿಗಳು ರಿಲಯನ್ಸ್ ಜೈ ಪ್ರೈವೇಟ್ ಲಿಮಿಟೆಡ್ (RJPL), ರಿಲಯನ್ಸ್ ಅನ್ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್ (RUPL), ರಿಲಯನ್ಸ್ EV ಪ್ರೈವೇಟ್ ಲಿಮಿಟೆಡ್ ಮತ್ತು ರಿಲಯನ್ಸ್ ರೈಸ್ ಪ್ರೈವೇಟ್ ಲಿಮಿಟೆಡ್ (RRPL).

ಈ ಕಂಪನಿಗಳು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಅಧೀನ ಸಂಸ್ಥೆಗಳಾಗಿದ್ದು, ವಿದ್ಯುತ್ ಶಕ್ತಿ ಉತ್ಪಾದನೆ, ಮಾಹಿತಿ ತಂತ್ರಜ್ಞಾನ ಸಲಹಾ, ಮೂಲಸೌಕರ್ಯ ಮತ್ತು ಇಂಧನ ಸಾಗಣೆಗಾಗಿ ವಾಹನಗಳ ತಯಾರಿಕೆಯಂತಹ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತವೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಹೊರತುಪಡಿಸಿ, ಸೋಮವಾರ ರಿಲಯನ್ಸ್ ಪವರ್ ಷೇರುಗಳ ಬೆಲೆಯಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ರಿಲಯನ್ಸ್ ಪವರ್ ಷೇರುಗಳ ಬೆಲೆ ಸೋಮವಾರ 4 ಶೇಕಡಾಕ್ಕಿಂತ ಹೆಚ್ಚಿನ ಏರಿಕೆಯೊಂದಿಗೆ 26.07 ರೂ. ಮುಟ್ಟಿವೆ. ರಿಲಯನ್ಸ್ ಪವರ್ ಷೇರುಗಳ 52 ವಾರಗಳ ಗರಿಷ್ಠ ಬೆಲೆ 34.35 ರೂ. ಹಾಗೂ ಕನಿಷ್ಠ ಬೆಲೆ 13.80 ರೂ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಆಗಸ್ಟ್ 2022 ರಲ್ಲಿ ಪ್ರತಿ ಷೇರಿಗೆ ರೂ 123 ರಂತೆ FCCB ರೂಪದಲ್ಲಿ 400 ಮಿಲಿಯನ್ ಡಾಲರ್​ ಸಂಗ್ರಹಿಸುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಆದರೂ, ನಂತರ ಕಂಪನಿಯು ಈ ಯೋಜನೆಯನ್ನು ಮುಂದುವರಿಸಲಿಲ್ಲ.