ವಸೀಂ ಪಠಾಣ, ಮಹಮ್ಮದ್ ಆರೀಫ್ 
ನ್ಯೂಸ್

ಶಂಕಿತ ಮಾಸ್ಟರ್ ಮೈಂಡ್ ವಸೀಂ, ತುಫೆಲ್ ಪೊಲೀಸ್ ಕಸ್ಟಡಿಗೆ: ಹಳೇಹುಬ್ಬಳ್ಳಿ ದಾಂಧಲೆ ಪ್ರಕರಣ

Webdesk - Ravikanth

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಆರೋಪಿ ವಾಸಿಂ ಪಠಾಣನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಇಲ್ಲಿಯ 4ನೇ ಜೆಎಂಎಫ್​ಸಿ ನ್ಯಾಯಾಲಯ ಆದೇಶಿಸಿದೆ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ವಾಸಿಂನನ್ನು ಬಂಧಿಸಿ, ಹುಬ್ಬಳ್ಳಿಗೆ ಕರೆತಂದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು 10 ದಿನ ವಶಕ್ಕೆ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 5 ದಿನ ನೀಡಿದೆ. ಇನ್ನೊಬ್ಬ ಆರೋಪಿ ತುಫೆಲ್ ಮುಲ್ಲಾನನ್ನೂ ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಈ ವೇಳೆ ತುಫೆಲ್ ಕಣ್ಣೀರು ಹಾಕಿದ್ದಾಗಿ ತಿಳಿದುಬಂದಿದೆ.

ತಪ್ಪು ಒಪ್ಪಿಕೊಂಡ?: ‘ಆವತ್ತು ಜನರನ್ನು ಸೇರಿಸಿದ್ದು ನಾನೇ’ ಎಂದು ವಾಸೀಂ ಪಠಾಣ ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಾಸೀಂ ಪಠಾಣ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಕಟ್ಟ್ಟ್ ಸಂಪ್ರದಾಯವಾದಿ ಮುಸ್ಲಿಂ. ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ಈತ, ಸಮುದಾಯದಲ್ಲಿ ಮೊಬಾಲೀಕ್ ಆಗಿ ಗುರುತಿಸಿಕೊಂಡಿದ್ದ. 1978ರಲ್ಲಿ ಕಟ್ಟರ್ ಮುಸ್ಲಿಂವಾದಿಗಳಿಂದ ಅಸ್ತಿತ್ವಕ್ಕೆ ಬಂದಿರುವ ಮುಂಬೈ ಮೂಲದ ರಜಾ ಆಕಾಡೆಮಿ ಮುಖಂಡನಾಗಿ ಹುಬ್ಬಳ್ಳಿ ಯಲ್ಲೂ ಸಂಘಟನೆ ಮಾಡುತ್ತಿದ್ದ. ರೌಡಿಶೀಟರ್ ಮೊಹಮ್ಮದ ಬೇಪಾರಿ, ತೌಫೀಲ್ ಮುಲ್ಲಾ ಮತ್ತಿತರ ಜತೆ ಸೇರಿ ಸಂಘಟನೆ ಕಟ್ಟುತ್ತಿದ್ದ. ಇದೇ ರಜಾ ಅಕಾಡೆಮಿ ಸದಸ್ಯರು ವಾಸೀಂ ಮುಂಬೈನಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದರು ಎನ್ನಲಾಗಿದೆ.

ಆರೀಫ್ ನಾಗರಾಳ ವಶಕ್ಕೆ: ಗಲಭೆಗೆ ಪ್ರಚೋದನೆ ನೀಡಿದ್ದ ಎನ್ನಲಾದ ಮತ್ತೊಬ್ಬ ಮಾಸ್ಟರ್ ಮೈಂಡ್, ವಸೀಂ ಪಠಾಣ ಜತೆಗಿದ್ದ ಮಹಮ್ಮದ್ ಆರೀಫ್ ನಾಗರಾಳ (ರಜವಿ) ಎಂಬಾತನನ್ನು ಪೊಲೀಸರು ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನಗೆ ಗೃಹ ಖಾತೆ ಕೊಟ್ಟರೆ ನಿಭಾಯಿ ಸುವ ಶಕ್ತಿ ಇದೆ. 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಗೃಹ ಖಾತೆ ಬಗ್ಗೆ ಚಿಂತನೆ ಮಾಡಿಲ್ಲ. ಗೃಹ ಖಾತೆ ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಷಯ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. | ಬಿ.ಸಿ.ಪಾಟೀಲ್ ಕೃಷಿ ಸಚಿವ

ಧಮ್ ಇದ್ರೆ ಬ್ಯಾನ್ ಮಾಡಲಿ: ಬಿಜೆಪಿಯವರಿಗೆ ಧಮ್ ಇದ್ರೆ ಎಸ್​ಡಿಪಿಐ, ಆರ್​ಎಸ್​ಎಸ್, ಭಜರಂಗದಳ ಇನ್ನಿತರ ಸಂಘಟನೆಗಳ ಮೇಲೆ ನಿಷೇಧ ಹೇರಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಹಳೇ ಹುಬ್ಬಳ್ಳಿ ದಾಂಧಲೆ ಘಟನೆಯನ್ನು ನಾನು ಸಹ ಖಂಡಿಸಿದ್ದೇನೆ. ಯಾರು ತಪ್ಪು ಮಾಡಿದ್ದಾರೆಯೋ ಅವರನ್ನು ಬಂಧಿಸಲಿ. ಅಮಾಯಕರನ್ನು ಬಂಧಿಸೋದು ಬೇಡ ಎಂದು ಸುದ್ದಿಗಾರರಿಗೆ ತಿಳಿಸಿದರು.

ಭದ್ರತೆಯಲ್ಲಿ ಪರೀಕ್ಷೆ ಬರೆದ ಅಭಿಷೇಕ: ಮೊಬೈಲ್ ಸ್ಟೇಟಸ್​ಗೆ ವಿವಾದಾತ್ಮಕ ಗ್ರಾಫಿಕ್ ವಿಡಿಯೋ ಇಟ್ಟಿದ್ದ ಆರೋಪದಡಿ ಬಂಧಿತ ಅಭಿಷೇಕ ಹಿರೇಮಠ ಶುಕ್ರವಾರ ಪೊಲೀಸ್ ಬಿಗಿ ಭದ್ರತೆ ನಡುವೆ ನಗರದ ಕಾಲೇಜೊಂದರಲ್ಲಿ ಪರೀಕ್ಷೆ ಬರೆದನು. 15ಕ್ಕೂ ಹೆಚ್ಚು ಪೊಲೀಸರು ಕಾರಾಗೃಹದಿಂದ ಬೆಳಗ್ಗೆ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಕಾಲೇಜಿನವರು ಅಭಿಷೇಕನಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದರು. ಅಭಿಷೇಕ್ ಜಾಮೀನು ಅರ್ಜಿಯನ್ನು 4ನೇ ಜೆಎಂಎಫ್​ಸಿ ನ್ಯಾಯಾಲಯ ತಿರಸ್ಕರಿಸಿದೆ.

ಸಾದಿಕನಿಗೂ ಪರೀಕ್ಷೆಗೆ ಅವಕಾಶ: ಗಲಭೆ ಪ್ರಕರಣದಲ್ಲಿ ಧಾರವಾಡ ಜೈಲಿನಲ್ಲಿರುವ 124ನೇ ಆರೋಪಿ ಮಹ್ಮದ ಸಾದಿಕ್ ಕಂಚಗಾರ ಎಂಬಾತನಿಗೂ ಪೊಲೀಸ್ ಭದ್ರತೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.