ನ್ಯೂಸ್

ಇನ್ನು ಮುಂದೆ ಪ್ರತಿ ನಿತ್ಯ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸಂಚಾರ

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಜನತೆಗೆ ದೆಹಲಿಯನ್ನು ಹತ್ತಿರ ಮಾಡುವ ನಿಟ್ಟಿನಲ್ಲಿ, ಪ್ರತಿನಿತ್ಯ ವಿಮಾನ ಸೇವೆಯ ಸಂಪರ್ಕ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ಈಗಾಗಲೇ ರೈಲ್ವೇ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇಂಡಿಗೋ ಏರ್​ಲೈನ್ಸ್​ ಜತೆಗೆ ಸಚಿವ ಪ್ರಲ್ಹಾದ ಜೋಶಿ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಹುಬ್ಬಳ್ಳಿ - ಮುಂಬೈ ವಾಯುಮಾರ್ಗದಲ್ಲಿ ಇಂಡಿಯೋ ಏರ್​ಲೈನ್ಸ್​ ಮೂಲಕ ಪ್ರಯಾಣ ಸಾಧ್ಯವಾಗಲಿದೆ.

ಸಚಿವರ ಕೋರಿಕೆಗೆ ಸ್ಪಂದಿಸಿದ್ದ ಇಂಡಿಗೋ ಏರ್ ಲೈನ್ಸ್ ಅಧಿಕಾರಿಗಳು, ನವೆಂಬರ್ 14 ರಿಂದ ಪ್ರತಿದಿನ ವಿಮಾನ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಟಿಕೆಟ್‌ ಬುಕ್ಕಿಂಗ್‌ ಕೂಡ ಈಗಾಗಲೇ ಪ್ರಾರಂಭವಾಗಿದೆ.

ಹುಬ್ಬಳ್ಳಿಯಿಂದ ದೆಹಲಿಗೆ ಹೊಸದಾಗಿ ಸಂಚರಿಸುವ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲ್​ಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ಹೊಸದಾಗಿ ಆರಂಭವಾಗುತ್ತಿರುವ ವಿಮಾನ ಸೇವೆಯೆ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ.

ಪ್ರತಿ ದಿನ ದೆಹಲಿಯಿಂದ ಬೆಳಗ್ಗೆ 10 ಗಂಟೆಗೆ ವಿಮಾನ ಸೇವೆಯ ವೇಳಾಪಟ್ಟಿ ನಿಗದಿಪಡಿಸಲಾಗಿದ್ದು, 12.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಇನ್ನು ಹುಬ್ಬಳ್ಳಿಯಿಂದ ಮಧ್ಯಾಹ್ನ 1.15 ಕ್ಕೆ ಹೊರಡಲಿರುವ ಇಂಡಿಗೋ ಏರ್ ಲೈನ್ಸ್ ವಿಮಾನ 3.45 ಕ್ಕೆ ದೆಹಲಿ ತಲುಪಲಿದೆ.

ವೇಳಾಪಟ್ಟಿ :
ದೆಹಲಿ - ಹುಬ್ಬಳ್ಳಿ 10:00 – 12:45
ಹುಬ್ಬಳ್ಳಿ - ದೆಹಲಿ 13:15 – 15:45