ನ್ಯೂಸ್

ಜನವಿಶ್ವಾಸಕ್ಕೆ ಮೋದಿ ಮುಂದಡಿ; ಸಣ್ಣ ಉದ್ಯಮ ಅಪರಾಧ ಮಾಫಿಗೆ ಉದ್ಯಮ ಸ್ನೇಹಿ ವಿಧೇಯಕ ಶೀಘ್ರ

ವಿಜಯವಾಣಿ ಸುದ್ದಿಜಾಲ ನವದೆಹಲಿ

ಉದ್ಯಮ ವಲಯದಲ್ಲಿ ಸಣ್ಣಪುಟ್ಟ ಅಪರಾಧಗಳನ್ನು ನಿರಪರಾಧೀಕರಣಗೊಳಿಸುವ ಜನ ವಿಶ್ವಾಸ ಮಸೂದೆಯ ಎರಡನೇ ಹಂತದ ಆವೃತ್ತಿ ಮುಂದಿನ ವರ್ಷದ ಬಜೆಟ್ ಅಧಿವೇಶನದ ವೇಳೆ ಮಂಡನೆ ಆಗುವ ಸಾಧ್ಯತೆ ಇದೆ. ಕಳೆದ ವರ್ಷ 42 ಕಾಯ್ದೆಗಳ 183 ನಿಬಂಧನೆಗಳಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಸಣ್ಣ ಅಪರಾಧಗಳನ್ನು ಬದಿಗೆ ಸರಿಸುವ ಕ್ರಮ ಜಾರಿಗೊಳಿಸಿ, ವ್ಯವಹಾರದ ಸುಲಭತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜನ ವಿಶ್ವಾಸ ಕಾನೂನನ್ನು ಜಾರಿಗೆ ತಂದಿತ್ತು. ವಾಣಿಜ್ಯ ಸಚಿವಾಲಯ ಈಗ ಮಸೂದೆಯ ಎರಡನೇ ಆವೃತ್ತಿ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದು, ಅದಕ್ಕೆ ಸಂಬಂಧಪಟ್ಟವರ ಜತೆ ಸಮಾಲೋಚನೆ, ಮಾತುಕತೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಮಾಹಿತಿ ನೀಡಿದ್ದಾರೆ.

ಈವರೆಗೆ ಮಧ್ಯಸ್ಥಗಾರರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದೇವೆ. ಹಲವು ಇಲಾಖೆಗಳು ತಮ್ಮ ಸಚಿವಾಲಯಗಳ ಅಡಿಯಲ್ಲಿ ನಿರಪರಾಧೀಕರಣಗೊಳಿಸುವ ಕಾನೂನಿಗೆ ಸೂಕ್ತ ಸಲಹೆಗಳನ್ನು ನೀಡಿವೆ. ಸುರಕ್ಷತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳದೆ ಈ ಕ್ಷೇತ್ರಗಳಲ್ಲಿ ಉದ್ಯಮಕ್ಕೆ ಪೂರಕ ವಾತಾವರಣ ರೂಪಿಸುವ ಕುರಿತಂತೆ ಉತ್ತಮ ಮಾಹಿತಿ, ಅಭಿಪ್ರಾಯಗಳನ್ನು ನಮ್ಮ ಬಳಿ ಬಂದಿವೆ ಎಂದು ಗೋಯೆಲ್ ಹೇಳಿದ್ದಾರೆ.

ವಿಧೇಯಕದ ಬಗ್ಗೆ ಸಮಾಲೋಚನೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಕಷ್ಟ. ಮುಂದಿನ ಬಜೆಟ್ ಅಧಿವೇಶನದಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ವಿದೇಶಿ ಹೂಡಿಕೆಗೆ ನೆರವು

ದೇಶದ ವ್ಯಾಪಾರ ವಾತಾವರಣ ಸುಧಾರಿಸುವ ಈ ಕ್ರಮಗಳು ದೇಶಕ್ಕೆ ವಿದೇಶಿ ನೇರ ಹೂಡಿಕೆಗಳನ್ನು (ಎಫ್​ಡಿಐ) ಹೆಚ್ಚಿಸಲು ಸಹಾಯ ಮಾಡುತ್ತಿವೆ. ಭಾರತವು ಅತ್ಯಂತ ಆಕರ್ಷಕ ಎಫ್​ಡಿಐ ತಾಣ. ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅದರೊಂದಿಗೆ ಭಾರತದ ಬೆಳೆಯುತ್ತಿರುವ ಆಕಾಂಕ್ಷೆಗಳು ಮುಂಬರುವ ವರ್ಷಗಳಲ್ಲಿ ಎಫ್​ಡಿಐ ಹೆಚ್ಚಳಕ್ಕೆ ಖಂಡಿತವಾಗಿಯೂ ಸಹಾಯ ಮಾಡಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ವಿದೇಶಿ ನೇರ ಹೂಡಿಕೆಯಲ್ಲಿ ಹೆಚ್ಚಳ

ಸರ್ಕಾರಿ ಅಂಕಿಅಂಶಗಳ ಪ್ರಕಾರ, ಸೇವೆಗಳು, ಕಂಪ್ಯೂಟರ್, ಟೆಲಿಕಾಂ ಮತ್ತು ಔಷಧ ವಲಯಗಳಲ್ಲಿನ ಉತ್ತಮ ಒಳಹರಿವಿನ ಹಿನ್ನೆಲೆಯಲ್ಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಏಪ್ರಿಲ್-ಜೂನ್​ನಲ್ಲಿ ರೂ. 16.17 ಶತಕೋಟಿ ಅಮೆರಿಕನ್ ಡಾಲರ್​ಗೆ (ಶೇ 47.8) ಏರಿಕೆಯಾಗಿದೆ. ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆಯನ್ನು 2022 ಡಿಸೆಂಬರ್ 22ರಂದು ಮೊದಲ ಬಾರಿಗೆ ಲೋಕಸಭೆಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಂಡಿಸಿದ್ದರು. ನಂತರ, ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಈ ಬಗ್ಗೆ ಸಮಿತಿಯು ಶಾಸಕಾಂಗ - ಕಾನೂನು ಇಲಾಖೆ ಸೇರಿ ಎಲ್ಲಾ 19 ಸಚಿವಾಲಯಗಳೊಂದಿಗೆ ವಿಸõತ ಚರ್ಚೆ ನಡೆಸಿ 2023ರ ಮಾರ್ಚ್​ನಲ್ಲಿ ತನ್ನ ವರದಿಯನ್ನು ಅಂಗೀಕರಿಸಿ, ರಾಜ್ಯಸಭೆ ಮತ್ತು ಲೋಕಸಭೆ ಮುಂದಿಟ್ಟಿತ್ತು.

ತಿದ್ದುಪಡಿಯಲ್ಲೇನಿದೆ?

ಶಿಕ್ಷೆಯಿಂದ ವಿನಾಯಿತಿ ನೀಡುವ ಪ್ರಕ್ರಿಯೆ ಬಗ್ಗೆ ಉದಾಹರಣೆ ನೀಡುವುದಾದರೆ; ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಅಡಿ, ಕಾನೂನುಬದ್ಧ ಒಪ್ಪಂದ ಉಲ್ಲಂಘಿಸಿ ವೈಯಕ್ತಿಕ ಮಾಹಿತಿ ಬಹಿರಂಗಪಡಿಸುವುದಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ತಿದ್ದುಪಡಿ ವಿಧೇಯಕದ ಪ್ರಕಾರ ರೂ. 25 ಲಕ್ಷ ದಂಡ ವಿಧಿಸುವುದರ ಮೂಲಕ ಈ ಸಮಸ್ಯೆ ಇತ್ಯರ್ಥವಾಗಲಿದೆ.

ಕಾರಣಗಳೇನು?

ಒಪ್ಪಂದಗಳ ಜಾರಿ ಮತ್ತು ತೆರಿಗೆ ಅನುಸರಣೆ ಸೇರಿದಂತೆ ವ್ಯಾಪಾರ ಚಟುವಟಿಕೆಯ ವಿವಿಧ ಅಂಶಗಳನ್ನು ಒಳಗೊಂಡಿದ್ದ ವಿಶ್ವಬ್ಯಾಂಕ್​ನ ಈಸ್ ಆಫ್ ಡೂಯಿಂಗ್ ಬಿಜಿನೆಸ್ ಶ್ರೇಯಾಂಕ ವರದಿಯಲ್ಲಿ ಭಾರತ 2013ರಲ್ಲಿ 185 ದೇಶಗಳ ಮಧ್ಯೆ 132ನೇ ಸ್ಥಾನ ಹೊಂದಿತ್ತು. ಈದು 2020ರಲ್ಲಿ 63ಕ್ಕೆ ಏರಿತು. ನಂತರ ಶ್ರೇಯಾಂಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಸ್ಥಾಯಿ ಸಮಿತಿ ಸೇರಿದಂತೆ ವಿವಿಧ ತಜ್ಞರ ಸಮಿತಿಗಳು, ಕಂಪನಿ ಕಾನೂನು ಸಮಿತಿಯು ವ್ಯಾಪಾರ ಚಟುವಟಿಕೆಗಳಿಗೆ ಅಡೆತಡೆ ಕಡಿಮೆ ಮಾಡಲು ಹಲವು ಸುಧಾರಣೆಗಳನ್ನು ಶಿಫಾರಸು ಮಾಡಿವೆ. ಕಂಪನಿಯ ಕಾನೂನು ಸಮಿತಿಯು ತಾಂತ್ರಿಕ ಅಥವಾ ಕಾರ್ಯವಿಧಾನದ ಉಲ್ಲಂಘನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ವ್ಯಾಪಾರ ಚಟುವಟಿಕೆಗೆ ಭಾರೀ ತಡೆಯೊಡ್ಡುತ್ತಿದೆ ಎಂದು ಹೇಳಿದೆ. ನಂತರ, ಕಂಪನಿಗಳ ಕಾಯ್ದೆ-2013ನ್ನು 2019 ಮತ್ತು 2020ರಲ್ಲಿ ತಿದ್ದುಪಡಿ ತಂದು ಇವುಗಳನ್ನು ಸಿವಿಲ್ ಅಪರಾಧಗಳನ್ನಾಗಿ ಮರು-ವರ್ಗೀಕರಿಸಲು ತೀರ್ವನಿಸಲಾಗಿತ್ತು.

'