ನ್ಯೂಸ್

ಯೂಟ್ಯೂಬ್​ನಲ್ಲಿ ಕಲಿತು ಮನೆಯಲ್ಲೇ ಗರಿಗರಿಯಾದ ನಕಲಿ ನೋಟ್ ಪ್ರಿಂಟ್ ಮಾಡಿದ ಪುಂಡ!

ಮುಂಬೈ: ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ತನ್ನ ಮನೆಯಲ್ಲಿ ಕುಳಿತು ವ್ಯಕ್ತಿಯೊಬ್ಬನನ್ನು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಆತ ಯೂಟ್ಯೂಬ್ ವೀಡಿಯೋಗಳ ಮೂಲಕ ನಕಲಿ ನೋಟ್​ ಮಾಡಲು ಕಲಿತಿದ್ದಾನೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಆರೋಪಿಯು ಜಲಗಾಂವ್‌ ಜಿಲ್ಲೆಯ ಕುಸುಂಬಾ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ನೋಟ್​ ಮುದ್ರಣ ಘಟಕವನ್ನು ಸ್ಥಾಪಿಸಿದ್ದನು. “ಆರೋಪಿಯು ತನ್ನ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದಾನೆ ಎಂದು ಜಲಗಾಂವ್‌ನ ಎಂಐಡಿಸಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ನಂತರ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಗುರುವಾರ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದೆ' ಎಂದು ಅವರು ಹೇಳಿದರು.

ಆರೋಪಿಗಳು 1.5 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ 50,000 ರೂಪಾಯಿ ಶುಲ್ಕ ಪಡೆದು ಮಾರಾಟ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ಪೊಲೀಸರು ಪತ್ತೆ ಮಾಡಿದ್ದಾರೆ.

ಜಲಗಾಂವ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಎಂ ರಾಜ್‌ಕುಮಾರ್ “ಆರೋಪಿಗಳು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ನೋಡಿ ನಕಲಿ ನೋಟುಗಳನ್ನು ಮುದ್ರಿಸಲು ಕಲಿತಿದ್ದಾನೆ. ಈತನ ಜತೆ ಇನ್ನೂ ಕೆಲವರು ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಆತನನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾರ್ಚ್ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) 489-ಎ (ನಕಲಿ ಕರೆನ್ಸಿ ನೋಟುಗಳು) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)