ಬೆಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ಚುಟುಕು ಸಾಹಿತ್ಯದ ಕೃತಿಗಳು ರಚನೆ ಆಗಬೇಕು. ಆಗ ಮಾತ್ರ ಚುಟುಕು ಸಾಹಿತ್ಯ ಕ್ಷೇತ್ರ ಇನ್ನಷ್ಟು ಆಳವಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಹೇಳಿದ್ದಾರೆ.
ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ಎಚ್.ಎಸ್.ರೇಣುಕಾ ಪ್ರಸಾದ್ ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ ಹಾಗೂ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಚುಟುಕು ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಹೀಗಾಗಿ ಆಸಕ್ತಿಕರ ಸಂಗತಿಗಳನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ಹೇಳುಬಹುದು. ಸಾಹಿತ್ಯ ರಚನೆ ಸಂದರ್ಭದಲ್ಲಿ ಅರ್ಥಗರ್ಭಿತ ಪದಗಳನ್ನು ಬಳಸುವುದು ಕೂಡ ಮುಖ್ಯವಾಗುತ್ತದೆ ಎಂದರು.
ಹಿರಿಯ ಸಂಘಟಕ ರಾಂ.ಕೆ. ಹನುಮಂತಯ್ಯ ಮಾತನಾಡಿ, ಕನ್ನಡದಲ್ಲಿ ಚುಟುಕು ಕಟ್ಟುವುದೇ ಒಂದು ಸಂಭ್ರಮ. ಇದನ್ನು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕಲುಷಿತಗೊಂಡ ಸಮಾಜದ ವಾತಾವರಣದಲ್ಲಿ ಪ್ರವೃತ್ತಿಗಳನ್ನು ಮುಂದುವರಿಸುವುದು ಮುಖ್ಯ. ಫಾಸ್ಟ್ಫುಡ್ನಂತೆ ಅತಿಯಾದ ವೇಗ ಪಡೆದುಕೊಂಡ ಇಂದಿನ ಜೀವನ ಪದ್ಧತಿ ವ್ಯರ್ಥ ಎಂಬಂತಾಗಿದೆ. ಹೀಗಿರುವಾಗ ದೀರ್ಘ ಬರಹಗಳನ್ನು ಓದಿ, ಅರ್ಥೈಸಿಕೊಳ್ಳುವ ತಾಳ್ಮೆ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುವ ಚುಟುಕುಗಳ ಮೂಲಕ ಸಾಕಷ್ಟು ವಿಚಾರಗಳನ್ನು ಹೇಳಬಹುದಾಗಿದೆ ಎಂದು ಹೇಳಿದರು.
ಚುಟುಕು ಕವಿಗಳಾದ ವಿ.ರೇಣುಕ ಪ್ರಸನ್ನ ಹಾಗೂ ಪತ್ತಂಗಿ ಮುರಳಿ ಅವರಿಗೆ "ಎಚ್.ಎಸ್.ರೇಣುಕ ಪ್ರಸಾದ್' ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಚುಟುಕು ಕವಿಗೋಷ್ಠಿ ಹಾಗೂ "ಪ್ರಸ್ತುತ ಕಾಲಟ್ಟದಲ್ಲಿ ಚುಟುಕು ಸಾಹಿತ್ಯದ ಅಗತ್ಯತೆ' ವಿಚಾರದಲ್ಲಿ ವಿಚಾರ ಸಂಕಿರಣ ನಡೆಯಿತು. ಹಿರಿಯ ವಿದ್ವಾಂಸ ಗೀತಾಚಾರ್ಯ, ಕೈಗಾರಿಕಾ ಕನ್ನಡ ಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ವಿಜಯ ಸಂಜೆ ಕಾಲೇಜಿನ ಉಪಪ್ರಾಂಶುಪಾಲ ಡಾ.ಶಾಂತರಾಜು, ಲೇಖಕಿ ಡಾ.ಎ.ಶ್ರೀಲತಾ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಆರ್.ವಿಜಯಸಮರ್ಥ ಮತ್ತಿತರರಿದ್ದರು.