ಯಾವುದೇ ಚಿತ್ರದ ಸೀಕ್ವೆಲ್, ಮೊದಲ ಭಾಗಕ್ಕಿಂತ ದೊಡ್ಡ ಬಜೆಟ್, ತಾರಾಗಣದಲ್ಲಿ ಮೂಡಿಬರುವುದು, ಮೊದಲ ಸಿನಿಮಾ ಹಿಟ್ ಆದ ಖುಷಿಯಲ್ಲಿ ಚಿತ್ರತಂಡ ಎರಡನೇ ಭಾಗದ ಅದ್ಧೂರಿತನ ಇನ್ನಷ್ಟು ಹೆಚ್ಚಿಸಲು ಮುಂದಾಗುವುದು ಸಾಮಾನ್ಯ. ಅದಕ್ಕೆ "ಕೆಜಿಎ್', "ಕಾಂತಾರ', "ಪುಷ್ಪ' ಸರಣಿಗಳು ಉದಾಹರಣೆ. ಇದೀಗ ಈ ಸಾಲಿಗೆ ರಜಿನಿಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ "ಜೈಲರ್' ಕೂಡ ಸೇರಿದೆ. 2023ರಲ್ಲಿ ತೆರೆಗೆ ಬಂದ "ಜೈಲರ್' ದೊಡ್ಡ ಮಟ್ಟದಲ್ಲಿ ಯಶಸ್ಸಾಗಿತ್ತು. ರಜಿನಿ ಜತೆ ಶಿವರಾಜಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ಕಿಶೋರ್, ನಾಗ ಬಾಬು ವಿಶೇಷ ಪಾತ್ರಗಳಲ್ಲಿ ಮಿಂಚಿದ್ದರು. ವಿಶೇಷ ಅಂದರೆ ರಜಿನಿಗೆ ಬಿದ್ದಷ್ಟೇ ಚಪ್ಪಾಳೆ ಈ ಅತಿಥಿ ಪಾತ್ರಧಾರಿಗಳಿಗೂ ಸಿಕ್ಕಿತ್ತು. ಅದರ ಬೆನ್ನಲ್ಲೇ "ಜೈಲರ್ 2'ನಲ್ಲಿ ನಿರ್ದೇಶಕ ನೆಲ್ಸನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ನಟರ ಜತೆಗೆ ಇನ್ನೂ ಕೆಲ ವಿಶೇಷ ಅತಿಥಿಗಳನ್ನು ಚಿತ್ರದಲ್ಲಿ ಸೇರಿಸಿಕೊಂಡಿದ್ದಾರೆ.
ಮೇಘನಾ ಕಮ್ಬ್ಯಾಕ್
ಕನ್ನಡತಿ ಮೇಘನಾ ರಾಜ್ ಸರ್ಜಾ "ಜೈಲರ್ 2'ನಲ್ಲಿ ನಟಿಸುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆ ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ವಿಶೇಷ ಅಂದರೆ, ಬರೋಬ್ಬರಿ 14 ವರ್ಷಗಳ ನಂತರ ಮೇನಾ "ಜೈಲರ್' ಸೀಕ್ವೆಲ್ ಮೂಲಕ ಮತ್ತೆ ತಮಿಳಿಗೆ ಕಮ್ಬ್ಯಾಕ್ ಮಾಡಿದ್ದಾರೆ. 2010ರಲ್ಲಿ "ಕಾದಲ್ ಸೊಲ್ಲ ವಂದೆನ್' ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಅವರು, ನಂತರ "ವುಯರ್ತಿರು 420' (2011) ಮತ್ತು "ನಂದ ನಂದಿತಾ' (2012) ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ಮೇಘನಾ ಮಲಯಾಳಂ ಮತ್ತು ಕನ್ನಡದಲ್ಲೇ ಹೆಚ್ಚು ಬಿಜಿಯಾದ ಕಾರಣ, ಮತ್ತೆ ಕಾಲಿವುಡ್ನತ್ತ ಗಮನ ಹರಿಸಿರಲಿಲ್ಲ. ಇದೀಗ 14 ವರ್ಷಗಳ ನಂತರ ಪತಿ ಚಿರು ಸರ್ಜಾ ನೆಚ್ಚಿನ ನಟ ರಜಿನಿಕಾಂತ್ ಚಿತ್ರದಲ್ಲಿ ನಟಿಸುವ ಮೂಲಕ, ಪತಿಯ ಕನಸನ್ನು ಮೇಘನಾ ನನಸು ಮಾಡಿದ್ದಾರೆ. ಈ ಬಗ್ಗೆ ಖುದ್ದು ಅವರೇ ಮದುವೆ ವಾರ್ಷಿಕೋತ್ಸವದಂದು ಹೇಳಿ, ಸಂಭ್ರಮಿಸಿದ್ದರು. ಇನ್ನು ಚಿತ್ರದ ಬಗ್ಗೆ ಮೇಘನಾ, ""ಜೈಲರ್ 2' ಶೂಟಿಂಗ್ ಹಲವು ದಿನಗಳ ಕಾಲ ನಡೆಯಿತು. ತುಂಬ ಲಾಂಗ್ ಶೆಡ್ಯೂಲ್ ಪ್ಲಾ$್ಯನ್ ಮಾಡಿಕೊಂಡಿದ್ದರು. ಸುಮಾರು ಆರು ತಿಂಗಳ ಸಮಯ ನಾನು ಆ ಚಿತ್ರಕ್ಕೆ ನೀಡಿದ್ದೆ. ಆದರೆ, ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ' ಎಂದು ಮಾಹಿತಿ ನೀಡುತ್ತಾರೆ.
ಶಾರುಖ್ ಅಲ್ಲ ಹೃತಿಕ್
ಇನ್ನು "ಜೈಲರ್ 2'ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಕೆಲ ತಿಂಗಳಿನಿಂದ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ, ಆ ಸುದ್ದಿಗೆ ಕೆಲ ದಿನಗಳ ಹಿಂದೆ ಬ್ರೇಕ್ ಬಿದ್ದಿದ್ದು, ನಟ ಹೃತಿಕ್ ರೋಷನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ ಅವರ ಭಾಗದ ಶೂಟಿಂಗ್ ಕೂಡ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದು, ಹೃತಿಕ್ ಪಾತ್ರದ ಬಗ್ಗೆ ಕುತೂಹಲ ಉಂಟು ಮಾಡಿದೆ. ಹಾಗೇ ರಜಿನಿ ಜತೆ ಶಿವಣ್ಣ, ಮೋಹನ್ ಲಾಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇನಾ ರಾಜ್, ಹೃತಿಕ್ ರೋಷನ್ ಜತೆಜತೆಗೆ ಎಸ್.ಜೆ.ಸೂರ್ಯ, ಮಿಥುನ್ ಚಕ್ರವರ್ತಿ, ವಿಜಯ್ ಸೇತುಪತಿ ಕೂಡ ತಾರಾಗಣ ಸೇರಿಕೊಂಡಿದ್ದಾರೆ ಎನ್ನಲಾಗಿದೆ.