ನ್ಯೂಸ್

ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇನ್ಮುಂದೆ ಶಿಕ್ಷಣ ಸಚಿವಾಲಯ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವನ್ನಾಗಿ ಬದಲಿಸಿದೆ. ಹೊಸ ಶಿಕ್ಷಣ ನೀತಿಯನ್ವಯ ಈ ಹೆಸರಿನ ಬದಲಾವಣೆಗೆ ಆದ್ಯತೆ ನೀಡಿ ಶಿಫಾರಸು ಮಾಡಲಾಗಿತ್ತು.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಅನುಮೋದನೆಗೊಂಡಿದ್ದು, ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇನ್ಮುಂದೆ ಕೇಂದ್ರ ಶಿಕ್ಷಣ ಸಚಿವಾಲಯ ಎಂದು ಕರೆಯಲ್ಪಡಲಿದೆ.

1985ರಲ್ಲಿ ಪ್ರಧಾನಿಯಾಗಿದ್ದ ರಾಜೀವ್​ ಗಾಂಧಿ ಅವರ ಮನೋಇಂಗಿತದಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗಿತ್ತು.

ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್​ ನೇತೃತ್ವದ ತಜ್ಞರ ಸಮೂಹ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಬದಲಿಸಬೇಕು ಎಂದು ಮೊದಲ ಬಾರಿಗೆ ಶಿಫಾರಸು ಮಾಡಿತ್ತು. ಕೆಲವು ಜನರು ದಾರಿ ತಪ್ಪಿಸಿದ್ದರಿಂದ ಅಂದಿನ ಪ್ರಧಾನಿ ರಾಜೀವ್​ ಗಾಂಧಿ ಅವರು 1985ರ ಸೆಪ್ಟೆಂಬರ್​ನಲ್ಲಿ ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಆರ್​ಎಸ್​ಎಸ್​ ಅಲ್ಲದೆ ಅದರೊಂದಿಗೆ ಗುರುತಿಸಿಕೊಂಡಿರುವ ಹಲವು ಸಂಘಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಲೇ ಇದ್ದವು.

ಕೇಂದ್ರ ಶಿಕ್ಷಣ ಇಲಾಖೆಯು ಶೈಕ್ಷಣಿಕ ಮತ್ತು ಕಲಿಕೆಯ ವಿಷಯವಾಗಿ ಹೆಚ್ಚಿನ ಒತ್ತು ನೀಡುವಂತೆ ಮಾಡುವ ಉದ್ದೇಶಕ್ಕಾಗಿ ಸಚಿವಾಲಯದ ಹೆಸರನ್ನು ಬದಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.